×
Ad

ಬಾಕಿ ವೇತನ ಕುರಿತು ದೂರಿದ್ದ ಮಹಿಳಾ ಹಾಕಿ ಕೋಚ್ ವಿರುದ್ಧ ʼಡೇಟಾ ಕಳವುʼ ಆರೋಪ ಹೊರಿಸಿದ ಹಾಕಿ ಇಂಡಿಯಾ

Update: 2021-11-04 16:54 IST
Photo: Facebook

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ನೆದರ್‍ಲ್ಯಾಂಡ್ಸ್ ದೇಶದ ಸ್ಜೋಯೆರ್ಡ್ ಮರೀಜ್ನೆ ಅವರ ಪೂರ್ಣ ವೇತನವನ್ನು ಕ್ರೀಡಾ ಪ್ರಾಧಿಕಾರ ಇನ್ನೂ ಪಾವತಿಸಿಲ್ಲ ಹಾಗೂ ಉತ್ತರ ಪ್ರದೇಶ ಸರಕಾರ ಕೂಡ ತಾನು ಭರವಸೆ ನೀಡಿದ್ದ ರೂ. 25 ಲಕ್ಷ ನಗದು ಬಹುಮಾನ ನೀಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದ ಬೆನ್ನಲ್ಲೇ ಹಾಕಿ ಕೋಚ್ ಅವರು ʼಡೇಟಾ ಕಳವುʼ ಮಾಡಿದ್ದಾರೆಂದು ಪ್ರಾಧಿಕಾರ ಆರೋಪಿಸಿದೆಯಲ್ಲದೆ ಲ್ಯಾಪ್‍ಟಾಪ್ ಒಂದನ್ನು ವಾಪಸ್ ನೀಡದೇ ಇರುವುದಕ್ಕೆ ಅವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದೆ.

ತಮ್ಮ ಬಾಕಿ ವೇತನದ ಕುರಿತು ಕೋಚ್ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಹಾಕಿ ಇಂಡಿಯಾ, ಭಾರತದ ಕ್ರೀಡಾ ಆಡಳಿತವನ್ನು ತಪ್ಪಾಗಿ ಬಿಂಬಿಸುವ ಯತ್ನ ಇದಾಗಿದೆ ಹಾಗೂ ಕೋಚ್ ಅವರಿಗೆ ಕೇವಲ 1,800 ಅಮೆರಿಕನ್ ಡಾಲರ್ ಬಾಕಿ ಮೊತ್ತ ಪಾವತಿಸಬೇಕಿದೆ ಎಂದು ಹೇಳಿದೆ.

"ಅವರು ಲ್ಯಾಪ್‍ಟಾಪ್ ವಾಪಸ್ ನೀಡದೇ ಇರುವುದರಿಂದ ಹಾಕಿ ಇಂಡಿಯಾ ಅವರಿಗೆ ನಿರಾಕ್ಷೇಪಣಾ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ ಆದುದರಿಂದ ಕ್ರೀಡಾ ಪ್ರಾಧಿಕಾರ ಅವರ ಬಾಕಿ ವೇತನ 1800 ಡಾಲರ್ ತಡೆಹಿಡಿಯುವ ಹಕ್ಕು ಹೊಂದಿದೆ" ಎಂದು ಹಾಕಿ ಇಂಡಿಯಾ ಹೇಳಿದೆ. ಲ್ಯಾಪ್‍ಟಾಪ್‍ನಲ್ಲಿ ಪ್ರಮುಖ ದತ್ತಾಂಶಗಳಿರುವುದರಿಂದ ಅದನ್ನು ವಾಪಸ್ ನೀಡಲು ಹೇಳಿದ್ದಕ್ಕೆ ಅವರು ಭಾರತದ ಕ್ರೀಡಾ ಆಡಳಿತವನ್ನೇ ದೂಷಿಸಿದ್ದಾರೆ ಎಂದು ಹಾಕಿ ಇಂಡಿಯಾ ಹೇಳಿದೆ.

ಲ್ಯಾಪ್‍ಟಾಪ್ ವಾಪಸ್ ನೀಡುವ ಪ್ರಕ್ರಿಯೆಯನ್ನು ತಾವೀಗಾಗಲೇ ಆರಂಭಿಸಿರುವುದಾಗಿ ಹಾಗೂ ಅದು ಒಲಿಂಪಿಕ್ಸ್ ವೇಳೆ ಕ್ರ್ಯಾಶ್ ಆಗಿದ್ದಾಗಿ ಈಗ ನೆದರ್‌ ಲ್ಯಾಂಡ್ಸ್ ನಲ್ಲಿರುವ ಮರೀಜ್ನೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News