ಅಮೆರಿಕ ದೂತಾವಾಸ ಸ್ವಾಧೀನಪ್ರಕ್ರಿಯೆಯ ವಾರ್ಷಿಕೋತ್ಸವ ಆಚರಿಸಿದ ಇರಾನ್

Update: 2021-11-04 17:14 GMT
photo:twitter/@AJEnglish

ಟೆಹ್ರಾನ್, ನ.3: 1979ರಲ್ಲಿ ಟೆಹ್ರಾನ್‌ನಲ್ಲಿನ ಅಮೆರಿಕ ದೂತಾವಾಸವನ್ನು ಸ್ವಾಧೀನಪಡಿಸಿಕೊಂಡ ಪ್ರಕ್ರಿಯೆಯ ವಾರ್ಷಿಕ ದಿನಾಚರಣೆಯ ಅಂಗವಾಗಿ ಇರಾನ್‌ನ ಸಾವಿರಾರು ಜನತೆ ಟೆಹ್ರಾನ್‌ನಲ್ಲಿ ಬೃಹತ್ ರ್ಯಾಲಿ ನಡೆಸಿ ‘ಅಮೆರಿಕಕ್ಕೆ ಸಾವು’, ‘ಇಸ್ರೇಲ್‌ಗೆ ಸಾವು’ ಮುಂತಾದ ಘೋಷಣೆ ಕೂಗಿದರಲ್ಲದೆ, ಅಮೆರಿಕ ಮತ್ತು ಇಸ್ರೇಲ್‌ನ ಧ್ವಜಗಳನ್ನು ಸುಟ್ಟುಹಾಕಿದರು.

ಅಮೆರಿಕದ ದೂತಾವಾಸವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿಸಿಕೊಂಡ ಬಿಕ್ಕಟ್ಟು 444 ದಿನ ಮುಂದುವರಿದಿತ್ತು ಮತ್ತು ಅಮೆರಿಕ-ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧವನ್ನು ತುಂಡರಿಸಿತ್ತು. ಈಗಲೂ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯ ಹದಗೆಟ್ಟಿದೆ.

ಇರಾನ್ ಸರಕಾರದ ಆಶ್ರಯದಲ್ಲಿ ಈ ಘಟನೆಯ ವಾರ್ಷಿಕ ದಿನಾಚರಣೆ ಪ್ರತೀ ವರ್ಷ ನಡೆಯುತ್ತದೆ. ಆದರೆ ಕಳೆದ ವರ್ಷ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆಚರಣೆ ರದ್ದಾಗಿತ್ತು. ಈ ವರ್ಷ ಸುಮಾರು 800 ನಗರಗಳಲ್ಲಿ ಸಾವಿರಾರು ಪ್ರಜೆಗಳು ರ್ಯಾಲಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ. ಟೆಹ್ರಾನ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾರ್ಪ್ಸ್‌ನ ಮುಖ್ಯಸ್ಥ ಜನರಲ್ ಹುಸೈನ್ ಸಲಾಮಿ,

ಈ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ಅಮೆರಿಕ ನಡೆಸುತ್ತಿರುವ ದಬ್ಬಾಳಿಕೆ ಮತ್ತು ಆಕ್ರಮಣ ಖಂಡನೀಯವಾಗಿದೆ. ಈ ದೇಶದ ಹಿತಾಸಕ್ತಿಗೆ ಘಾಸಿಯೆಸಗಲು ಬಯಸುವ ಯಾವುದೇ ಶಕ್ತಿಯ ವಿರುದ್ಧ ದೇಶದ ಮಕ್ಕಳು ಶೌರ್ಯದಿಂದ ಒಗ್ಗೂಡಿ ನಿಲ್ಲಲಿದ್ದಾರೆ ಎಂದರು. ಇರಾನ್ ಪರಮಾಣು ಕಾರ್ಯಕ್ರಮ ಮುಂದುವರಿಸಿರುವ ಹಿನ್ನೆಲೆಯಲ್ಲಿಉ ಅಮೆರಿಕ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಬಿಗಡಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News