ವಿಂಡೀಸ್ ವಿರುದ್ದ ಆಸಿಸ್‌ಗೆ 8 ವಿಕೆಟ್ ಜಯ

Update: 2021-11-06 17:46 GMT

ಅಬುಧಾಬಿ, ನ. 6: ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 12 ಹಂತದ ಪಂದ್ಯವೊಂದರಲ್ಲಿ ಶನಿವಾರ ಆಸ್ಟ್ರೇಲಿಯವು ವೆಸ್ಟ್ ಇಂಡೀಸ್ ತಂಡವನ್ನು ಭರ್ಜರಿ 8 ವಿಕೆಟ್‌ಗಳಿಂದ ಸೋಲಿಸಿದೆ. ಈ ವಿಜಯದೊಂದಿಗೆ ಅದು ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿದಿದೆ.

ಆರಂಭಿಕ ಡೇವಿಡ್ ವಾರ್ನರ್ 56 ಎಸೆತಗಳಿಂದ 89 ರನ್‌ಗಳನ್ನು ಸಿಡಿಸಿ ಅಜೇಯವಾಗಿ ಉಳಿದು ಆಸ್ಟ್ರೇಲಿಯದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರನ್ನುಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಗೆಲ್ಲಲು 158 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯ 16.2 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು 161 ರನ್‌ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು. 23 ಎಸೆತಗಳು ಬಾಕಿಯಿರುವಂತೆಯೇ ವಿಜಯ ದಾಖಲಾಯಿತು.

ವಾರ್ನರ್‌ಗೆ ಮಿಚೆಲ್ ಮಾರ್ಶ್ (32 ಎಸೆಗಳಲ್ಲಿ 53 ರನ್) ಉತ್ತಮ ಜೊತೆಗಾರಿಕೆ ನೀಡಿದರು. ವಿಜಯದ ರನ್ ಗಳಿಸುವ ಪ್ರಯತ್ನದಲ್ಲಿದ್ದಾಗ ಅವರು ಔಟಾದರು. ಈ ಜೋಡಿಯು 2ನೇ ವಿಕೆಟ್‌ಗೆ 124 ರನ್‌ಗಳನ್ನು ಸೇರಿಸಿತು.

ತನ್ನ ಸೆಮಿಫೈನಲ್ ಭವಿಷ್ಯವನ್ನು ತಿಳಿಯಲು ಆಸ್ಟ್ರೇಲಿಯವು ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್ ನಡುವಿನಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ದಕ್ಷಿಣ ಆಫ್ರಿಕವು ದೊಡ್ಡ ಅಂತರದಿಂದ ಗೆದ್ದರೆ ಮಾತ್ರ ಅದು (ದಕ್ಷಿಣ ಆಫ್ರಿಕ) ಸೆಮಿಫೈನಲ್ ತಲುಪುತ್ತದೆ. ಇಲ್ಲದಿದ್ದರೆ 1.216 ನೆಟ್ ರನ್ ರೇಟ್ ಹೊಂದಿರುವ ಆಸ್ಟ್ರೇಲಿಯ ಸೆಮಿಫೈನಲ್‌ಗೆ ಹೋಗುತ್ತದೆ.

ಆಸ್ಟ್ರೇಲಿಯವು 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು 8 ಅಂಕಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕವು 4 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು 6 ಅಂಕಗಳನ್ನು ಹೊಂದಿದೆ.

ಇದಕ್ಕೂ ಮುನ್ನ ಅಬುಧಾಬಿಯ ಝಾಯೇದ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯ ತಂಡದ ನಾಯಕ ಆ್ಯರನ್ ಫಿಂಚ್ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳನ್ನು ಗಳಿಸಿತು.

ಆರಂಭಿಕ ಕ್ರಿಸ್ ಗೇಲ್ (9 ಎಸೆತಗಳಲ್ಲಿ 15 ರನ್) ಮಿಂಚಲು ವಿಫಲರಾದರು. ಇನ್ನೋರ್ವ ಆರಂಭಿಕ ಎವಿನ್ ಲೂಯಿಸ್ (26 ಎಸೆತಗಳಲ್ಲಿ 29 ರನ್) ತಂಡದ ಮೊತ್ತಕ್ಕೆ ಅಳಿಲು ಸೇವೆ ಸಲ್ಲಿಸಿದರು. ಬಳಿಕ ಶಿಮ್ರಾನ್ ಹೆಟ್ಮಯರ್ (28 ಎಸೆತಗಳಲ್ಲಿ 27 ರನ್) ಮತ್ತು ನಾಯಕ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ಇನಿಂಗ್ಸ್‌ಗೆ ಆಸರೆಯೊದಗಿಸಿದರು. ಪೊಲಾರ್ಡ್ 31 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸಿದರು.

ಜೋಶ್ ಹ್ಯಾಝಲ್‌ವುಡ್ 4 ಓವರ್‌ಗಳಲ್ಲಿ 39 ರನ್‌ಗಳನ್ನು ನೀಡಿ 4 ಮಹತ್ವದ ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News