×
Ad

ಉಪ್ಪಿನಂಗಡಿ : ನಿವೃತ್ತ ಯೋಧನ ಮನೆದಾರಿಯಲ್ಲಿ ಐದು ಗ್ರೇನೆಡ್ ಪತ್ತೆ

Update: 2021-11-07 10:39 IST
ಇಳಂತಿಲದಲ್ಲಿ ಪತ್ತೆಯಾಗಿರುವ ಗ್ರೇನೆಡ್ ಗಳು

ಉಪ್ಪಿನಂಗಡಿ, ನ.7: ನಿವೃತ್ತ ಯೋಧರೊಬ್ಬರ ಮನೆಗೆ ತೆರಳುವ ದಾರಿಮಧ್ಯೆ ಐದು ಗ್ರೇನೆಡ್ ರೀತಿಯ ಸ್ಫೋಟಕಗಳು ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಇಳಂತಿಲ ಎಂಬಲ್ಲಿ ಶನಿವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮ ನಿವಾಸಿ, ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿಒ ಆಗಿ ನಿವೃತ್ತರಾಗಿರುವ ಜಯಕುಮಾರ್ ಪೂಜಾರಿ ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಜಯಕುಮಾರ್ ಪೂಜಾರಿ ಶನಿವಾರ ಸಂಜೆ ವೇಳೆ ಉಪ್ಪಿನಂಗಡಿಯಿಂದ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ದಾರಿಮಧ್ಯೆ ಇಳಿಜಾರಿನ ತಂತಿ ಬೇಲಿಯ ಎಡಭಾಗದಲ್ಲಿ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡುಬಂದಿದೆಯೆನ್ನಲಾಗಿದೆ. ಈ ಪೈಕಿ ಒಂದು ಗ್ರೇನೆಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು, ಉಳಿದ ನಾಲ್ಕು ಅಲ್ಲಿಯೇ ಹರಡಿಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದವು ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಗ್ರೇನೇಡ್ ಗಳನ್ನು ಯಾವುದಾದರೂ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದು ಎಂಬ ಕಾರಣಕ್ಕೆ ಜಯಕುಮಾರ್ ಪೂಜಾರಿ ಅವುಗಳನ್ನು ಕೊಂಡೊಯ್ದು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


40 ವರ್ಷ ಹಳೆಯ ಗ್ರೇನೆಡ್: ದ.ಕ. ಎಸ್ಪಿ

ಇಳಂತಿಲದಲ್ಲಿ ಪತ್ತೆಯಾಗಿರುವ ಗ್ರೇನೆಡ್ ಗಳು ಸುಮಾರು 40 ವರ್ಷ ಹಳೆಯದು. ಅದು ಎಲ್ಲಿಂದ ಬಂತೆಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ  ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News