×
Ad

ಚಾರ್ಮಾಡಿ ಘಾಟಿ: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಮೃತ್ಯು

Update: 2021-11-07 13:15 IST

ಬೆಳ್ತಂಗಡಿ, ನ.7: ಚಾರ್ಮಾಡಿ ಘಾಟಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಮೃತರನ್ನು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ನಿವಾಸಿ ನವೀನ್(24) ಮೃತಪಟ್ಟ ಯುವಕ. ಇಂದು ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ನವೀನ್ ಅವರು ರಾಮನಗರದಿಂದ ಧರ್ಮಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಅವರು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಭಾರೀ ಗಾತ್ರದ ಮರವೊಂದು ಅವರ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಮರದ ಅಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ನವೀನ್ ರನ್ನು ಇತರ ವಾಹನದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರು ಕೊನೆಯಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News