×
Ad

ಜನರಿಂದ ಲೂಟಿ ಮಾಡಿದ ಹಣ ಕಾರ್ಪೊರೇಟ್ ಕಂಪೆನಿಗಳಿಗೆ: ಬಾಲಕೃಷ್ಣ ಶೆಟ್ಟಿ ಆರೋಪ

Update: 2021-11-07 18:28 IST

ಉಡುಪಿ, ನ.7: ಕೇಂದ್ರ ಸರಕಾರ ಜನರನ್ನು ಲೂಟಿ ಮಾಡುವ ಉದ್ದೇಶ ದಿಂದ ತೈಲ ಬೆಲೆ ಏರಿಕೆ ಮಾಡುತ್ತಿದ್ದು, ಹೀಗೆ ಜನರಿಂದ ಲೂಟಿ ಮಾಡಿರುವ ಹಣವನ್ನು ಕಾರ್ಪೊರೇಟ್ ಕಂಪೆನಿಗಳಿಗೆ ನೀಡುತ್ತಿವೆ. ಇದರಿಂದ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಆಸ್ತಿಯು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿಯ ಹೊಟೇಲ್ ಸಾಯಿ ರೆಸಿಡೆನ್ಸಿ ಸಭಾಂಗಣದಲ್ಲಿ ರವಿವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಉಡುಪಿ ತಾಲೂಕು ಸಮಿತಿಯ 23ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೋವಿಡ್ ಲಸಿಕೆಗಾಗಿ ಕಳೆದ ಬಜೆಟ್‌ನಲ್ಲಿ 35 ಸಾವಿರ ಕೋಟಿ ರೂ. ಅನು ದಾನವನ್ನು ಮೀಸರಿಸಲಾಗಿತ್ತು. ಕೇಂದ್ರ ಸರಕಾರ 100 ಕೋಟಿ ಲಸಿಕೆ ವಿತರಣೆ ಮಾಡಿದೆ ಎಂದು ಹೇಳುತ್ತಿದೆ. ಆದರೆ ಇದರಲ್ಲಿ ರಾಜ್ಯಗಳ ಪಾಲು ಕೂಡ ಇದೆ ಹಲವಾರು ಮಂದಿ ಖಾಸಗಿಯಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಉಚಿತ ಲಸಿಕೆ ವಿತರಣೆಗೂ ತೈಲ ಬೆಲೆ ಏರಿಕೊ ಯಾವುದೇ ಸಂಬಂಧವಿಲ್ಲ ಎಂದರು.

ಬಿಜೆಪಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಅನಂತರ ಕೇಂದ್ರ ಅಬಕಾರಿ ಸುಂಕವನ್ನು 30ರೂ. ಹೆಚ್ಚಳ ಮಾಡಿದೆ. ದೇಶದಲ್ಲಿ 7ಲಕ್ಷದ 73 ಸಾವಿರ ಸಣ್ಣ ಕೈಗಾರಿಕೆಗಳು ಹಾಗೂ ಸಂಸ್ಥೆಗಳು ಮುಚ್ಚುಗಡೆಯಾಗಿದ್ದು, ಇದರಿಂದ ನಿರು ದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಭಾರತದಲ್ಲಿ ಪ್ರಸ್ತುತ 100 ಮಂದಿಯಲ್ಲಿ 8 ಮಂದಿಗೆ ಉದ್ಯೋಗವಿಲ್ಲಂತಾಗಿದೆ ಎಂದು ಅವರು ದೂರಿದರು.

ಕೇರಳ ಸರಕಾರ ಭತ್ತದ ಬೆಂಬಲ ಬೆಲೆಯನ್ನು 2740ರೂ.ಗೆ ನಿಗದಿಪಡಿಸಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯದ ರೈತರು 2500ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಕಾನೂನಾತ್ಮಕ ಬೆಂಬಲ ಸಿಗಬೇಕು. ಈ ಬಗ್ಗೆ ಸೂಕ್ತ ಕಾನೂನು ತಂದು ಪ್ರತೀ ಗ್ರಾಮದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ರೈತರ ಈ ಹೋರಾಟಕ್ಕೆ ಸಿಪಿಐಎಂ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸಿಪಿಐಎಂ ಹಿರಿಯ ಮುಖಂಡ ಪಿ.ವಿಶ್ವನಾಥ ರೈ ವಹಿಸಿದ್ದರು. ಸಿಪಿಐಎಂ ರಾಜ್ಯ ಉಪಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ಕೋಣಿ ಉಪಸ್ಥಿತರಿದ್ದರು. ಪಕ್ಷದ ಸದಸ್ಯ ವಾದಿರಾಜ ಬುದ್ಯ ಧ್ವಜ ಅನಾವರಣ ಗೊಳಿಸಿದರು.

ಸಮ್ಮೇಳನದಲ್ಲಿ ಬೆಲೆ ಏರಿಕೆ ವಿರುದ್ಧ, ಕಾರ್ಪೊರೇಟ್ ಕಂಪೆನಿ ಪರವಾದ ಕಾಯಿದೆ ವಾಪಾಸ್ಸು ಪಡೆಯುವಂತೆ, ವಸತಿ ರಹಿತರಾಗಿ ನಿವೇಶನ ನೀಡುವಂತೆ, ಉಡುಪಿಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಒಟ್ಟು ಏಳು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಸಿಪಿಎಂ ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ ಗೊಲ್ಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸವಿುತಿ ಸದಸ್ಯ ಕವಿರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News