×
Ad

ವಿಶ್ವಕಪ್: ನ್ಯೂಝಿಲ್ಯಾಂಡ್ ಸೆಮಿ ಫೈನಲ್‌ಗೆ ಲಗ್ಗೆ

Update: 2021-11-07 18:45 IST
photo: AFP

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಗ್ರೂಪ್-2ರಲ್ಲಿ ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 8 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಸೋಲಿಸಿದ ನ್ಯೂಝಿಲ್ಯಾಂಡ್ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಫಲಿತಾಂಶದೊಂದಿಗೆ ಭಾರತ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ.
   
ಗ್ರೂಪ್-2ರಲ್ಲಿ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ 8 ಅಂಕ ಗಳಿಸಿದ ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ ತಂಡದೊಂದಿಗೆ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಎರಡು ತಂಡಗಳು ತಲಾ 8 ಅಂಕ ಗಳಿಸಿವೆ. ಗ್ರೂಪ್-2ರಲ್ಲಿ ಭಾರತವು ಸೋಮವಾರ ನಮೀಬಿಯಾ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಗ್ರೂಪ್-1ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಈಗಾಗಲೇ ಸೆಮಿ ಫೈನಲ್ ತಲುಪಿವೆ.

ಕಿವೀಸ್ ಮೂರನೇ ಬಾರಿ ಟ್ವೆಂಟಿ-20ಯಲ್ಲಿ ಸೆಮಿ ಫೈನಲ್ ತಲುಪಿದೆ. ವಿರಾಟ್ ಕೊಹ್ಲಿ ಬಳಗ ಅಫ್ಘಾನಿಸ್ತಾನ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಗೆದ್ದರೆ ಸೆಮಿ ಫೈನಲ್ ತಲುಪುವ ಕನಸು ಕಾಣುತ್ತಿತ್ತು. ಭಾರತದ ಕ್ರಿಕೆಟ್ ಅಭಿಮಾನಿಗಳು ಅಫ್ಘಾನ್ ತಂಡದ ಗೆಲುವಿಗೆ ಹಾರೈಸಿದ್ದರು. ಆದರೆ ಇದೀಗ ಟೂರ್ನಿಯಲ್ಲಿ ಕೊಹ್ಲಿ ಪಡೆಯ ಕೊನೆಯ ಕನಸು ಭಗ್ನವಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 125 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 18.1 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು.  ನಾಯಕ ಕೇನ್ ವಿಲಿಯಮ್ಸನ್(ಔಟಾಗದೆ 40, 42 ಎಸೆತ, 3 ಬೌಂಡರಿ) ಹಾಗೂ ಡೆವೊನ್ ಕಾನ್ವೇ(ಔಟಾಗದೆ 36, 32 ಎಸೆತ, 4 ಬೌಂಡರಿ)3ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್(28) ಹಾಗೂ ಮಿಚೆಲ್(17)ಮೊದಲ ವಿಕೆಟಿಗೆ 26 ರನ್ ಗಳಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News