​ಅಂಬಲಪಾಡಿ: ಮನೆಗೆ ನುಗ್ಗಿ 18.35 ಲಕ್ಷ ರೂ. ಮೌಲ್ಯದ ಸೊತ್ತು ಕಳವು

Update: 2021-11-07 15:17 GMT

ಉಡುಪಿ, ನ.7: ಅಂಬಲಪಾಡಿಯ ಸಿಪಿಸಿ ಲೇಔಟ್‌ನ ಮನೆಯೊಂದಕ್ಕೆ ನ.6ರಂದು ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಜಯ ಗಣೇಶ ಬೀಡು ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಮಿನ ಕಪಾಟಿನಲ್ಲಿದ್ದ ಎರಡು ಚಿನ್ನದ ನೆಕ್ಲೇಸ್, ನಾಲ್ಕು ಬಂಗಾರದ ಬಳೆಗಳು, ಒಂದು ಕರಿಮಣಿ ಬಳೆ, ಒಂದು ಮುತ್ತಿನ ಸರ, ಅವಲಕ್ಕಿ ಸರ, ಬಂಗಾರದ ಸರ, ನಾಲ್ಕು ವಜ್ರದ ಕಿವಿ ಓಲೆ, ವಜ್ರದ ಉಂಗುರು, ನವರತ್ನದ ಉಂಗುರ, ರೂಬಿ ಸ್ಟೋನ್ ನಕ್ಲೇಸ್, ಚಿನ್ನದ ಪೆಂಡೆಂಟ್ ಮತ್ತು ಉಂಗುರ ಸೇರಿದಂತೆ ಒಟ್ಟು 332 ಗ್ರಾಂ ತೂಕದ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಗಳನ್ನು ಕಳವು ಮಾಡಿದ್ದಾರೆ.

ಅದೇ ರೀತಿ ಗೆಸ್ಟ್ ರೂಮಿನ ಕಪಾಟಿನ ಲಾಕರ್ ಒಡೆದು ಅದರಲ್ಲಿದ್ದ 3,00,000ರೂ. ನಗದು ಮತ್ತು ಸುಮಾರು 1,35,000ರೂ. ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 18,35,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News