ಪತ್ರಕರ್ತರ ಅಗತ್ಯಗಳಿಗೆ ಮಾಧ್ಯಮ ಅಕಾಡಮಿ ಸ್ಪಂದಿಸುವಂತಾಗಲಿ: ಎನ್. ಶಶಿಕುಮಾರ್
ಮಂಗಳೂರು, ನ.8: ಕರ್ನಾಟಕ ಮಾಧ್ಯಮ ಅಕಾಡಮಿ ದ.ಕ. ಜಿಲ್ಲೆ ಸೇರಿದಂತೆ ಎಲ್ಲಾ ಪತ್ರಕರ್ತರ ಸಮಸ್ಯೆ, ಅಗತ್ಯಗಳನ್ನು ಅರಿತುಕೊಂಡು ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶುಭ ಹಾರೈಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕರ್ನಾಟಕ ಮಾಧ್ಯಮ ಅಧ್ಯಕ್ಷ ಸದಾಶಿವ ಶೆಣೈಯವರಿಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಿದಾಗ ವೃತ್ತಿಪರ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿದೆ. ಮಾಧ್ಯಮ ಮತ್ತು ಪೊಲೀಸರ ಕರ್ತವ್ಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹಗಲು ರಾತ್ರಿ ಎನ್ನದ ಕರ್ತವ್ಯದ ಒತ್ತಡದ ನಡುವೆ ದುಡಿಯುವ ಪತ್ರಕರ್ತರನ್ನು ಗುರುತಿಸುವ, ಮಾರ್ಗದರ್ಶನ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಈ ಸಂರ್ಭ ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳರನ್ನು ಪೊಲೀಸ್ ಆಯುಕ್ತರು ಸನ್ಮಾನಿಸಿದರು.
ಸನ್ಮಾನ ಸೀಕರಿಸಿದ ಬಳಿಕ ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಪತ್ರಕರ್ತರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಅಕಾಡಮಿ ತಂಡ ಕೆಲಸ ನಿರ್ವಹಿಸಲಿದೆ. ಪತ್ರಕರ್ತರು ಹಾಗೂ ಅವರ ಕುಟುಂಬದ ಅಗತ್ಯಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಲಿದೆ ಎಂದರು.
ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು.