×
Ad

ನ. 10ರಿಂದ ಮನೆ ಮನೆಗೆ ಲಸಿಕಾಮಿತ್ರ: ಡಿಎಚ್‌ಒ ಡಾ. ಕಿಶೋರ್ ಕುಮಾರ್

Update: 2021-11-08 21:46 IST

ಮಂಗಳೂರು, ನ.8: ಈಗಾಗಲೇ ಪ್ರಥಮ ಡೋಸ್ ಪಡೆದು, ಎರಡನೇ ಡೋಸ್‌ಗೆ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಕೋವಿಡ್ ಲಸಿಕೆ ನೀಡುವ ಮನೆಮನೆಗೆ ಲಸಿಕಾ ಮಿತ್ರ ವಿನೂತನ ಅಭಿಯಾನಕ್ಕೆ ನವೆಂಬರ್ 10 ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು.

ಅವರು ಮಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಂನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ಲಸಿಕಾ ಅಭಿಯಾನದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈ ಅಭಿಯಾನಕ್ಕೆ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸ್ವಯಂ ಸೇವಕರು, ಎರಡನೇ ಡೋಸ್ ಲಸಿಕೆ ಪಡೆಯದ ಫಲಾನುಭವಿಗಳ ಮನೆ ಮನೆಗೆ ತೆರಳಿ, ಲಸಿಕೆಯ ಮಹತ್ವ ತಿಳಿಸಿಕೊಟ್ಟು, ಜಾಗೃತಿ ಮೂಡಿಸಿ, ಲಸಿಕೆ ಪಡೆಯುವಂತೆ ಮನವಿ ಮಾಡಲಿದ್ದಾರೆ. ಆ ಮೂಲಕ ಜಿಲ್ಲೆಯನ್ನು ಸಂಪೂರ್ಣ ಕೋವಿಡ್ ಲಸಿಕಾ ಜಿಲ್ಲೆಯನ್ನಾಗಿಸಲಾಗುವುದು ಎಂದು ಹೇಳಿದರು.

ಮೊದಲ ಹಂತದಲ್ಲಿ ಮನೆ ಮನೆಗೆ ಲಸಿಕಾ ಮಿತ್ರ ಅಭಿಯಾನಕ್ಕೆ ನ.10ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚಾಲನೆ ನೀಡಲಾಗುವುದು. ಮುಂದಿನ ಹಂತದಲ್ಲಿ ಜಿಲ್ಲೆಯಾದ್ಯಂತ ಈ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಲ್ಲಿ ಭಾಗವಹಿಸುತ್ತಿರುವ ಮಂಗಳೂರು ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ತರಬೇತಿಯನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಎನ್ನೆಸ್ಸೆಸ್ ಸ್ವಯಂ ಸೇವಕರು ಮನೆಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಈ ಲಸಿಕಾ ಅಭಿಯಾನದ ಯಶಸ್ವಿಗೆ ಕೈಜೋಡಿಸುವಂತೆ ಡಿಎಚ್‌ಒ ಕೋರಿದರು.

ಸಭೆಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಕುಮಾರ್, ಮನಪಾ ಕೋವಿಡ್ ವಿಭಾಗದ ನೋಡಲ್ ಅಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಎನ್ನೆಸ್ಸೆಸ್ ಘಟಕದ ಸಂಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News