ಭೋಪಾಲ್ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಅಗ್ನಿ ಅನಾಹುತ: ಕನಿಷ್ಠ ನಾಲ್ಕು ಶಿಶುಗಳು ಜೀವಂತ ದಹನ

Update: 2021-11-09 03:46 GMT

ಭೋಪಾಲ್:ಸೋಮವಾರ ರಾತ್ರಿ ಇಲ್ಲಿನ ಕಮಲ ನೆಹರೂ ಮಕ್ಕಳ ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಘಟಕ (ಎಸ್‌ಎನ್‌ಸಿಯು)ದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ ನಾಲ್ಕು ಶಿಶುಗಳು ಜೀವಂತ ದಹನವಾಗಿವೆ.

ಅಧಿಕಾರಿಗಳ ಹೇಳಿಕೆ ಪ್ರಕಾರ ಬೆಂಕಿ ಆಸ್ಪತ್ರೆಯ ಐಸಿಯು ಘಟಕವನ್ನು ಹೊಂದಿದ ಮೂರನೇ ಮಹಡಿಯಲ್ಲಿ ಆರಂಭವಾಗಿತ್ತು. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ಆ ಬಳಿಕ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶಿಸಿದ್ದಾರೆ.

"ವಾರ್ಡ್‌ನಲ್ಲಿ 40 ಮಕ್ಕಳಿದ್ದರು. ಈ ಪೈಕಿ 36 ಮಕ್ಕಳು ಸುರಕ್ಷಿತವಾಗಿವೆ. ಮೃತಪಟ್ಟ ಮಕ್ಕಳ ಪೋಷಕರಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. ರಾತ್ರಿ 9ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ನಂದಿಸುವ ಕಾರ್ಯದಲ್ಲಿ ನಿರತವಾದವು ಎಂದು ಫತೇಗಢ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಝುಬೈರ್ ಖಾನ್ ಹೇಳಿದ್ದಾರೆ.

ರಾತ್ರಿ 8.40ಕ್ಕೆ ಆಸ್ಪತ್ರೆಯ ಸಿಬ್ಬಂದಿ ರತ್ನೇಶ್ ಎಂಬವರು ಮೊದಲು ಮಾಹಿತಿ ನೀಡಿ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಇಡೀ ಕಟ್ಟಡದಲ್ಲಿ ಹೊಗೆ ಆವರಿಸಿದ್ದು, ಮಕ್ಕಳ ಸಂಬಂಧಿಕರು ಹಾಗೂ ಇತರರು ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿದ್ದರು. ಕಗ್ಗತ್ತಲು ಮತ್ತು ಹೊಗೆ ತುಂಬಿದ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ಪೋಷಕರನ್ನು ಸುರಕ್ಷೆ ದೃಷ್ಟಿಯಿಂದ ಹೊರಗೆ ಕಳುಹಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಯಿತು. ತಮ್ಮ ಮಕ್ಕಳನ್ನು ನೋಡಲು ಅವಕಾಶ ಮಾಡಿಕೊಡುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದರು.

ಅಂತಿಮವಾಗಿ 25 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಮಕ್ಕಳನ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಯಿತು ಎಂದು ಎಸ್ಪಿ ವಿಜಯ್ ಖತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News