ಆರೋಪಿ ವಕೀಲ ರಾಜೇಶ್ ಭಟ್ ಗೆ ಸೇರಿದ 12 ಬ್ಯಾಂಕ್ ಖಾತೆಗಳು ಸ್ಥಗಿತ: ಕಮಿಷನರ್ ಶಶಿಕುಮಾರ್

Update: 2021-11-09 10:54 GMT
ಕೆ.ಎಸ್.ಎನ್. ರಾಜೇಶ್ ಭಟ್

ಮಂಗಳೂರು, ನ.9: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿರುವ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಪತ್ತೆಗಾಗಿ ಲುಕೌಟ್ ನೋಟೀಸು ಜಾರಿಗೊಳಿಸಲಾಗಿದ್ದು, ಆರೋಪಿಯ 12 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

‘‘ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತ್ತೆಗೆ ಎಸಿಪಿ ರಂಜಿತ್ ಬಂಡಾರು ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ನಾಲ್ಕು ತಂಡಗಳು ಆರೋಪಿಯ ಪತ್ತೆ ಕಾರ್ಯದಲ್ಲಿ ನಿರತವಾಗಿವೆ.

ಪ್ರಕರಣದಲ್ಲಿ ಸಾಕ್ಷ ನಾಶಕ್ಕೆ ಸಂಬಂಧಿಸಿ ಮತ್ತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪವಿತ್ರ ಆಚಾರ್ಯ ಹಾಗೂ ಆನಂತ ಭಟ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಇದರ ಜತೆಯಲ್ಲಿ ಪ್ರಮುಖ ಆರೋಪಿ ಪತ್ತೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಪಿ ಹೆಸರಿನಲಿದ್ದ 12 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ಮನವಿ ಪತ್ರ ನೀಡಲಾಗಿದೆ. ಬ್ಯಾಂಕ್ ಗಳಲ್ಲಿ ಹಣ ಇರುವುದರಿಂದ ಅವುಗಳ ವರ್ಗಾವಣೆ, ಹಣ ಪಡೆಯದಂತೆ ಕ್ರಮ ವಹಿಸಲಾಗಿದೆ. ಅದರ ಜತೆಗೆ ಆರೋಪಿ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದಂತೆ ಲುಕ್‌ಔಟ್ ಸರ್ಕುಲರ್ (ಎಲ್‌ಒಸಿ)ಗಳನ್ನು ಜಾರಿಗೊಳಿಸಲಾಗಿದೆ. ಆರೋಪಿ ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ಕಡೆ ಸಂಚರಿಸುತ್ತಿದ್ದಾನೆಂಬ ಮಾಹಿತಿ ಮೇರೆಗೆ ಕನ್ನಡ, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್ ಹಾಗೂ ಹಿಂದಿ ಈ ಆರು ಭಾಷೆಗಳಲ್ಲಿ ಸಂಬಂಧಪಟ್ಟ ರಾಜ್ಯಗಳ ಪೊಲೀಸ್ ಘಟಕಗಳಿಗೆ ಈ ವ್ಯಕ್ತಿಯ ಮಾಹಿತಿಯನ್ನು ನೀಡಿ, ಎಲ್ಲೇ ಕಂಡು ಬಂದರೂ ಮಾಹಿತಿ ಒದಗಿಸುವಂತೆ ತನಿಖಾಧಿಕಾರಿಗಳ ಮೂಲಕ ಸಂಪರ್ಕ ಬೆಳೆಸಲಾಗಿದೆ. ಆದಷ್ಟು ಶೀಘ್ರದಲ್ಲಿ ತನಿಖಾ ತಂಡಗಳು ಆರೋಪಿಯನ್ನು ಬಂಧಿಸಲಿವೆ’’ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಅ. 18ರಂದು ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿರುವಂತೆಯೇ ವಕೀಲ ರಾಜೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದು, ಆರೋಪಿಯ ಇರುವಿಕೆಯನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಶ್ರಮ ವಹಿಸುತ್ತಿದ್ದಾರೆ. ಈ ನಡುವೆ ಆರೋಪಿ ಹೈಕೋರ್ಟ್ ಮೂಲಕ ಜಾಮೀನು ಅರ್ಜಿ ಸಲ್ಲಿಕೆಗೆ ಪ್ರಯತ್ನಿಸುತ್ತಿರುವ ಮಾಹಿತಿಯೂ ಇದ್ದು, ಪೊಲೀಸರಿಗೆ ಆರೋಪಿ ಬಂಧನ ತಲೆನೋವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News