ಹರೇಕಳ : ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ಅಭಿನಂದನಾ ಕಾರ್ಯಕ್ರಮ

Update: 2021-11-09 11:54 GMT

ಕೊಣಾಜೆ: ಅಕ್ಷರ ಸಂತ ಹಾಜಬ್ಬ ಅವರು ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವೀಡೀಯೋ ತುಣುಕನ್ನು ಎಲ್ಲಾ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಆದೇಶ ನೀಡಲಾಗಿದ್ದು,  ಹಾಜಬ್ಬರ ಮಾದರಿ ಕಾರ್ಯವನ್ನು ಎಳೆಯ ವಿದ್ಯಾರ್ಥಿಗಳೂ ಅರಿಯುಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಅಕ್ಷರ ಸಂತ ಹಾಜಬ್ಬರ ಶಿಕ್ಷಣ ಕ್ರಾಂತಿ, ಸೇವೆಯನ್ನು ಸಮಾಜವು ಎಂದಿಗೂ ಮರೆಯಲು ಸಾಧ್ಯವಿಲ್ಲ  ಎಂದು ಶಿಕ್ಷಣ ಇಲಾಖೆಯ ವಿದ್ಯಾಂಗ ಉಪ ನಿರ್ದೇಶಕ ಜಿ.‌ ಮಲ್ಲೇಸ್ವಾಮಿ ಹೇಳಿದರು.

ಹರೇಕಳ ನ್ಯೂಪಡ್ಪುವಿನ ಪ್ರೌಢಶಾಲೆಯಲ್ಲಿ  ಹರೇಕಳ ಮಂಗಳವಾರ ನಡೆದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸನ್ಮಾನ ಸಮಾರಂಭದಲ್ಲಿ ಅವರು ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರವೀಂದ್ರ ರೈ ಹರೇಕಳ ಅವರು, ಹರೇಕಳ ಹಾಜಬ್ಬರ ಶಾಲೆಯು ಇಂದು ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದೆ. ಈ ಶಾಲೆಯಲ್ಲಿ ಕಲಿತವರು ಪುಣ್ಯವಂತರು. ಹಾಜಬ್ಬರು ಸಾರ್ಥಕ ಬದುಕಿನ ವ್ಯಕ್ತಿಯಾಗಿದ್ದಾರೆ. ಸ್ವಾರ್ಥವನ್ನು ತ್ಯಜಿಸಿ ಪರಹಿತವನ್ನು ಬಯಸುವರು ಹಾಜಬ್ಬರಾಗಿದ್ದಾರೆ ಎಂದು ಹೇಳಿದರು.

ಮಾಜಿ ತಾಲ್ಲೂಕು ಪಂ. ಸದಸ್ಯರಾದ  ಮಹಮ್ಮದ್ ಮುಸ್ತಫಾ ಅವರು ಮಾತನಾಡಿ, ಹರೇಕಳ ಹಾಜಬ್ಬರು ದೇಶದ ಅತ್ಯುನ್ನತ 4ನೇ ನಾಗರಿಕ ಪ್ರಶಸ್ತಿಯು ಅರಸಿಕೊಂಡು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ ಹಾಗೂ ಇಡೀ ಹರೇಕಳಕ್ಕೆ ಪ್ರಶಸ್ತಿ ಬಂದಷ್ಟು   ಸಂತಸವಾಗಿದೆ ಎಂದರು.

ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ್ ನಾಯ್ಕ್, ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ರಾಜ್, ತಾಲೂಕು ಸಮನ್ವಯ ಅಧಿಕಾರಿ ಡಾ. ಪ್ರಶಾಂತ್ ಕುಮಾರ್,ಎಸಿಪಿ ಮಹೇಶ್ ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ,  ಟಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ಡಾ. ರಫೀಕ್ ಮಾಸ್ಟರ್, ಪಜೀರು ಚರ್ಚ್ ಉಪಾಧ್ಯಕ್ಷ ರಿಚರ್ಡ್, ಜುಮಾ ಮಸೀದಿಯ ಟಿ. ಖಾಲಿದ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ದೇರಳಕಟ್ಟೆಯ ಫಾಹಿಮಾ ಇಂಟರ್ ನ್ಯಾಷನಲ್ ಟ್ರಾವೆಲ್ ಸಂಸ್ಥೆಯ ಪಾಲುದಾರ ಕಲಂದರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾಧರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂ. ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ತಾಲೂಕು ಪಂ. ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News