×
Ad

ಬಿಜೆಪಿ ತನ್ನ ಟೀಕಾಕಾರರನ್ನೆಲ್ಲಾ ದೇಶದ್ರೋಹಿ ಎಂದು ಬಿಂಬಿಸುತ್ತಿದೆ:ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

Update: 2021-11-09 18:14 IST

ಹೈದರಾಬಾದ್: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸತತ ಎರಡನೇ ದಿನವೂ ವಾಗ್ದಾಳಿ ಮುಂದುವರೆಸಿದ್ದಾರೆ. ಬಿಜೆಪಿ ತನ್ನ ಟೀಕಾಕಾರರೆಲ್ಲರನ್ನು ದೇಶದ್ರೋಹಿಗಳು ಹಾಗೂ  ನಗರ ನಕ್ಸಲರು ಎಂದು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

ಸತತ 2ನೇ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು (ಈಡಿ) ವಿರೋಧಿಗಳನ್ನು ಹೆದರಿಸಲು ಬಳಸುತ್ತದೆ. ಆದರೆ ನಾನು ಅವರಿಗೆ ಹೆದರುವುದಿಲ್ಲ ಎಂದು ಹೇಳಿದರು.

ಮುಂದಿನ ಯಾಸಂಗಿ (ರಾಬಿ) ಹಂಗಾಮಿನಲ್ಲಿ ಕೇಂದ್ರವು ರಾಜ್ಯದಿಂದ ಭತ್ತವನ್ನು ಸಂಗ್ರಹಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಪ್ರತಿ ಹಳ್ಳಿಗಳಲ್ಲಿ ಟಿಆರ್‌ಎಸ್ ಪ್ರತಿಭಟನೆ ನಡೆಸಲಿದೆ ಎಂದು ಅವರು ಘೋಷಿಸಿದರು. ಬಿಜೆಪಿ ನಾಯಕರು ತಮ್ಮ ಹಳ್ಳಿಗೆ ಬಂದಾಗ  ಅವರನ್ನು  ಸುಟ್ಟುಹಾಕಿ ಎಂದು ರೈತರಿಗೆ ಕರೆ ನೀಡಿದರು.

ತೆಲಂಗಾಣದಿಂದ ಬೇಯಿಸಿದ ಅಕ್ಕಿಯನ್ನು ಖರೀದಿಸುವುದಿಲ್ಲ ಮತ್ತು ಹಸಿ ಭತ್ತವನ್ನು ಮಾತ್ರ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಹೇಳಿದೆ. ಹುಝುರಾಬಾದ್ ಉಪಚುನಾವಣೆಯಲ್ಲಿ ಟಿಆರ್‌ಎಸ್ ಮಾಜಿ ರಾಜ್ಯ ಸಚಿವ ಹಾಗೂ  ಟಿಆರ್‌ಎಸ್ ಬಂಡಾಯ ನಾಯಕ ಎಟಾಲ ರಾಜೇಂದರ್ ವಿರುದ್ಧ ಸೋತ ನಂತರ ಕೆಸಿಆರ್ ಕೇಂದ್ರ ಹಾಗೂ  ರಾಜ್ಯದಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ಆರಂಭಿಸಿದ್ದಾರೆ.

 “ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸುವುದು ತಪ್ಪೇ? ಗಡಿಯಲ್ಲಿ ಚೀನಾದ ಆಕ್ರಮಣದಿಂದ ನಮ್ಮ ಪ್ರತಿಯೊಂದು ಇಂಚು ಭೂಮಿಯನ್ನು ರಕ್ಷಿಸಬೇಕು ಎಂದು ಕಳವಳ ವ್ಯಕ್ತಪಡಿಸುವುದು ಅಪರಾಧವೇ?. ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ  (ಬಿಜೆಪಿ ಸಂಸದ) ವರುಣ್ ಗಾಂಧಿ ಕೂಡ ರೈತರನ್ನು  ಬೆಂಬಲಿಸಿ ಮಾತನಾಡಿದ್ದಾರೆ. ಹಾಗಾದರೆ ಅವರು ದೇಶದ್ರೋಹಿಗಳೇ? ಎಂದು ಕೆಸಿಆರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News