ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ರಾಜೀನಾಮೆ ಅಂಗೀಕಾರ: ಸಿಧು ಬೇಡಿಕೆ ಈಡೇರಿಸಿದ ಪಂಜಾಬ್ ಸಿಎಂ

Update: 2021-11-09 13:57 GMT

ಚಂಡೀಗಢ: ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ಎಪಿಎಸ್ ಡಿಯೋಲ್ ಅವರು ನೀಡಿದ್ದ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಅವರು ಅಂಗೀಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕ ನವಜೋತ್ ಸಿಧು ಅವರ ಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ ಹಾಗೂ ಮುಂದಿನ ವರ್ಷದ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಆಡಳಿತ ಪಕ್ಷದ ಪ್ರಮುಖ ಇಬ್ಬರು ನಾಯಕರಾದ ಸಿಧು ಹಾಗೂ ಚನ್ನಿ ನಡುವೆ ಸಂಭಾವ್ಯ ಒಪ್ಪಂದದ ಸಂಕೇತವಾಗಿದೆ.

ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆಯನ್ನು ಪಂಜಾಬ್ ಸಚಿವ ಸಂಪುಟ ಅಂಗೀಕರಿಸಿದೆ. ಈ ಹುದ್ದೆಯನ್ನು ನಾಳೆಯೊಳಗೆ ಭರ್ತಿ ಮಾಡಲಾಗುವುದು ಎಂದು ಚನ್ನಿ ತಿಳಿಸಿದರು ಎನ್ನುವುದಾಗಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಮುಖ್ಯಮಂತ್ರಿ ಚನ್ನಿ ತಮ್ಮ ಸರಕಾರದ ಪ್ರಮುಖ ವಕೀಲ ಡಿಯೋಲ್ ರನ್ನು ಬೆಂಬಲಿಸಿದ ಕೆಲವು ದಿನಗಳ ನಂತರ ಡಿಯೋಲ್ ಅವರ ರಾಜೀನಾಮೆ ಅಂಗೀಕಾರವಾಗಿದೆ.

ಡಿಯೋಲ್ ಅವರನ್ನು ಅಡ್ವೊಕೇಟ್ ಜನರಲ್ ಸ್ಥಾನಕ್ಕೆ ನೇಮಕ ಮಾಡಿರುವ ವಿಚಾರವಾಗಿ ಸೆಪ್ಟೆಂಬರ್‌ನಲ್ಲಿ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಪಿಎಸ್ ಡಿಯೋಲ್ ಅವರನ್ನು ವಜಾಗೊಳಿಸಿದರೆ ಆ ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಕಳೆದ ವಾರ ಸಿಧು ಹೇಳಿದ್ದರು.

ಅಮರಿಂದರ್ ಸಿಂಗ್ ಅವರ ರಾಜೀನಾಮೆಯ ನಂತರ ಸರಕಾರದ ಪ್ರಮುಖ ವಕೀಲ ಅತುಲ್ ನಂದಾ ಅವರು ರಾಜೀನಾಮೆ ನೀಡಿದ್ದರು. ಡಿಯೋಲ್ ಅವರನ್ನು ಮುಖ್ಯಮಂತ್ರಿ ಚನ್ನಿ ಅವರು ಪಂಜಾಬ್ ಸರಕಾರದ ಪ್ರಮುಖ ವಕೀಲರನ್ನಾಗಿ ನೇಮಕ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News