ಬಡತನ, ತಂದೆಯ ನಿಧನದ ನೋವಿನ ನಡುವೆ ನೀಟ್ ತೇರ್ಗಡೆಗೊಂಡ ತಮಿಳುನಾಡಿನ ಆದಿವಾಸಿ ಬಾಲಕಿ

Update: 2021-11-09 13:30 GMT
Photo: Social media

ಕೊಯಂಬತ್ತೂರು: ತಮಿಳುನಾಡಿನ  ಎಂ ನಂಜಪ್ಪನೂರ್ ಎಂಬ ಕುಗ್ರಾಮದ ನಿವಾಸಿಯಾಗಿರುವ ಆದಿವಾಸಿ ಹುಡುಗಿ ಎಂ ಸಂಗವಿ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೂ ಛಲ ಬಿಡದೆ ಶ್ರಮಿಸಿ ನೀಟ್ 2021ರಲ್ಲಿ 202 ಅಂಕಗಳನ್ನು ಗಳಿಸಿ, ವೈದ್ಯೆಯಾಗಬೇಕೆಂಬ ತನ್ನ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದ್ದಾಳೆ. ಮಲಸ್ರ್ ಸಮುದಾಯಕ್ಕೆ ಸೇರಿದ ಸಂಗವಿ ಕೃಷಿ ಕಾರ್ಮಿಕ ದಂಪತಿ ಮುನಿಯಪ್ಪನ್ ಹಾಗೂ ವಸಂತಮಣಿ ಅವರ ಏಕೈಕ ಪುತ್ರಿ. ಕಳೆದ ವರ್ಷ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಆಕೆಯ ತಂದೆ ನಿಧನರಾದ ನಂತರ ಸಂಗವಿ ಕುಟುಂಬದ ಪಾಡು ಹೇಳ ತೀರದಾಗಿತ್ತು. ಭಾಗಶಃ ದೃಷ್ಟಿಹೀನೆಯಾಗಿರುವ  ಆಕೆಯ ತಾಯಿಗೆ ಯಾವುದೇ ಉದ್ಯೋಗ ಮಾಡುವುದು ಕೂಡ ಅಸಾಧ್ಯವಾಗಿತ್ತು.

ಕೋವಿಡ್ ಸಾಂಕ್ರಾಮಿಕದ ಸಂದರ್ಭ ಗ್ರಾಮದ ಜನರಿಗೆ ಆಹಾರ ಕಿಟ್ ವಿತರಿಸಲೆಂದು ಆರ್ ಸಿಲಂಬರಸನ್ ಅವರ ನೇತೃತ್ವದಲ್ಲಿ ವಕೀಲರ ತಂಡವೊಂದು ಆಗಮಿಸಿದ್ದ ಸಂದರ್ಭ ಸಂಗವಿ ಕುಟುಂಬದ ಸಮಸ್ಯೆ ಅವರಿಗೆ ಅರಿವಿಗೆ ಬಂದಿತ್ತು. ಎರಡು ವರ್ಷದ ಹಿಂದೆ ನೀಟ್ ಗೆ ಹಾಜರಾಗಿದ್ದರೂ ವಿಫಲವಾಗಿರುವ ಬಗ್ಗೆ ಆಕೆ ತಿಳಿಸಿದ್ದಳು. ವಕೀಲರ ತಂಡ ಹಾಗೂ ಸ್ಥಳೀಯ ಮಾಧ್ಯಮ ಮಂದಿ ಆಕೆಗೆ  ಸರ್ವ ರೀತಿಯ ಸಹಾಯ ನೀಡಲು ಮುಂದೆ ಬಂದಿತ್ತು.

ಗ್ರಾಮದಲ್ಲಿ 12ನೇ ತರಗತಿ ತೇರ್ಗಡೆ ಹೊಂದಿದ ಮೊದಲ ಬಾಲಕಿಯಾಗಿರುವ ಸಂಗವಿ ಎರಡು ವಿಫಲ ಯತ್ನಗಳ ನಂತರ ಈ ಬಾರಿ ನೀಟ್ ತೇರ್ಗಡೆಯಾಗಿ ಎಲ್ಲರಿಗೆ ಹೆಮ್ಮೆಯುಂಟು ಮಾಡಿದ್ದಾಳೆ.

ಆದರೆ ತನ್ನ ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ವೈದ್ಯಕೀಯ ಶಿಕ್ಷಣ ಹೇಗೆ ಮುಂದುವರಿಸುವುದು ಎಂಬ ಚಿಂತೆ ಆಕೆಗಿದ್ದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸಹಾಯವನ್ನು ಆಕೆ ಎದುರು ನೋಡುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News