×
Ad

ಎಲ್ಲ ಅಲೆಮಾರಿಗಳಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ: ರವೀಂದ್ರ ಶೆಟ್ಟಿ

Update: 2021-11-09 20:29 IST

ಮಂಗಳೂರು, ನ.9: ಅಲೆಮಾರಿ ಸಮುದಾಯಗಳ ಬಹುತೇಕ ಮಂದಿ ಇಂದಿಗೂ ಸೂರು ಇಲ್ಲದೆ ಬೀದಿಗಳಲ್ಲಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅವರಿಗೆ ನಿವೇಶನ, ಮನೆ ಒದಗಿಸಲು ಕ್ರಮ ಕೈಗೊಂಡಿದ್ದು ಎಲ್ಲ ಅಲೆಮಾರಿಗಳಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದಾಗಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ.

ಮಂಗಳವಾರ ಕದ್ರಿ ಶ್ರೀ ಗೋರಕ್ಷನಾಥ ಜ್ಞಾನಮಂದಿರದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ದ.ಕ ಜಿಲ್ಲಾ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಲ್ಲಿ 46 ಸಮುದಾಯಗಳು ಒಳಗೊಂಡಿವೆ. ಈಗಾಗಲೇ ರಾಜ್ಯದ 19 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದೇನೆ. ಇಡೀ ರಾಜ್ಯಾದ್ಯಂತ ಸುತ್ತಾಡಿ ಈ ಜನಾಂಗದ ಎಲ್ಲ ಸಮುದಾಯಗಳಿಗೂ ಸರಕಾರದಿಂದ ದೊರೆಯಬಹುದಾದ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಲು ಶ್ರಮಿಸುತ್ತಿದ್ದೇನೆ. ಪ್ರತಿಯೊಂದು ಸಮುದಾಯ ಕೂಡ ಬಲಿಷ್ಠವಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಅಗತ್ಯವಿದೆ. ಸರಕಾರದಿಂದ ನಿಗಮಕ್ಕೆ ಇನ್ನಷ್ಟು ಅನುದಾನ ಪಡೆಯಲು ಪ್ರಯತ್ನಿಸುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಮಠಾಧಿಪತಿ ಮಂಗಳಗಿರಿ ಸ್ವಾಮೀಜಿ ಜಿಲ್ಲಾ ಸಮಿತಿಯನ್ನು ಉದ್ಘಾಟಿಸಿದರು. ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ಬಿ.ಗಣಾಚಾರಿ ಗದಗ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಮೂಡುಬಿದಿರೆ, ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಒಕ್ಕೂಟದ ಉಪಾಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ ಬೆಂಗಳೂರು, ಮನಪಾ ಸದಸ್ಯರಾದ ಶಕಿಲಾ ಕಾವ, ಕದ್ರಿ ಮನೋಹರ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಲ್.ವಿ, ಉಪಾಧ್ಯಕ್ಷ ಅನಂತ ಕೃಷ್ಣ ಯಾದವ್, ಯುವ ಘಟಕದ ರಾಜ್ಯಾಧ್ಯಕ್ಷ ಸಚಿನ್ ದಳವಾಯಿ ಬೆಂಗಳೂರು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಚೈತ್ರಾ ಬೆಂಗಳೂರು, ದ.ಕ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಬಿ.ಆರ್., ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಉಪಸ್ಥಿತರಿದ್ದರು.

ಒಕ್ಕೂಟದ ಉಪಾಧ್ಯಕ್ಷ ತುಕಾರಾಮ್ ನಾಗಪ್ಪ ವಾಷ್ಠರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಪುರುಷೋತ್ತಮ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News