×
Ad

ಬೆಳ್ತಂಗಡಿ : ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ನಿಧನ

Update: 2021-11-09 21:15 IST

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿಯ ಪಿ. ಭೋಜರಾಜ ಹೆಗ್ಡೆ(99) ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯ ದಿಂದ ಮಂಗಳವಾರ ನಿಧನರಾದರು.

ಗಾಂಧಿವಾದಿಯಾಗಿ ಬದುಕಿದ್ದ ಭೋಜರಾಜ ಹೆಗ್ಡೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅವರು ಉಜಿರೆ ರಬ್ಬರ್ ಸೊಸೈಟಿ, ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ‌ ಉಪಾಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ನೇತೃತ್ವದಲ್ಲಿ 1942ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತವನ್ನು ಬಿಟ್ಟು ತೊಲಗಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕ ರಾಜಕೀಯ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸವನ್ನು ಅನುಭವಿಸಿದ್ದರು.

ಸರಳ ಸಜ್ಜನಿಕೆಯಿಂದ, ನೇರ ನಡೆ ನುಡಿಗಳ ಮೂಲಕ ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು. ಮೂಡಬಿದ್ರೆಯ ಜೈನ ಮಠದಿಂದ ತ್ಯಾಗಿ ಸೇವಾರತ್ನ ಪ್ರಶಸ್ತಿ, ಅಹ್ಮದಾಬಾದ್ ನ ಮೊರಾರ್ಜಿ ದೇಸಾಯಿ ಪ್ರತಿಷ್ಠಾನದಿಂದ ಗ್ರಾಮೋದ್ಧಾರ ಪ್ರಶಸ್ತಿಗೆ ಭಾಜನರಾಗಿದ್ದರು.

ಮೃತರು ಪುತ್ರ, ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News