ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧನೌಕೆ ಹಸ್ತಾಂತರಿಸಿದ ಚೀನಾ
ಬೀಜಿಂಗ್, ನ.9: ಅರಬಿ ಸಮುದ್ರ ಮತ್ತು ಹಿಂದು ಮಹಾಸಾಗರದಲ್ಲಿ ತನ್ನ ಮತ್ತು ಮಿತ್ರರಾಷ್ಟ್ರಗಳ ನೌಕಾ ಚಟುವಟಿಕೆಯನ್ನು ಹೆಚ್ಚಿಸುವ ಪ್ರಯತ್ನ ಮುಂದುವರಿಸಿರುವ ಚೀನಾವು ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧನೌಕೆಯನ್ನು ಹಸ್ತಾಂತರಿಸಿದೆ ಎಂದು ವರದಿಯಾಗಿದೆ.
ಶಾಂಘೈಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚೀನಾ ಸ್ಟೇಟ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಶನ್ (ಸಿಎಸ್‌ಎಸ್‌ಸಿ) ವಿನ್ಯಾಸಗೊಳಿಸಿರುವ ‘ಪಿಎನ್ಎಸ್ ತುಘ್ರಿಲ್’ ಎಂಬ ಹೆಸರಿನ ಈ ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಗ್ಲೋಬಲ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ. ಈ ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿರುವುದರಿಂದ ಹಿಂದು ಮಹಾಸಾಗರ ವಲಯದಲ್ಲಿ ಸೇನಾಬಲದಲ್ಲಿ ಸಮತೋಲನ ಸಾಧ್ಯವಾಗಲಿದೆ ಎಂದು ಚೀನಾಕ್ಕೆ ಪಾಕಿಸ್ತಾನದ ರಾಯಭಾರಿ ಮೊಯಿನ್ ಉಲ್ ಹಕ್ ಹೇಳಿದ್ದಾರೆ..
ಸಮುದ್ರಪ್ರದೇಶಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ವೃದ್ಧಿ, ಹಿಂದು ಮಹಾಸಾಗರ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸೇನಾಬಲದ ಸಮತೋಲನ ಸಾಧಿಸುವುದೂ ಸೇರಿದಂತೆ ಈ ವಲಯದ ಭದ್ರತೆಯ ನಿಟ್ಟಿನಲ್ಲಿ ಈ ಯುದ್ಧನೌಕೆಯ ಸೇರ್ಪಡೆಯಿಂದ ಪಾಕಿಸ್ತಾನದ ನೌಕಾಬಲದ ಶಕ್ತಿ ವೃದ್ಧಿಸಲಿದೆ ಎಂದು ಮೊಯಿನ್ ಉಲ್ ಹಕ್ ಹೇಳಿಕೆಯನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಪಾಕಿಸ್ತಾನಕ್ಕೆ ಪೂರೈಸಲು ಉದ್ದೇಶಿಸಿರುವ 4 ಕಾವಲು ನೌಕೆಗಳಲ್ಲಿ ಪಿಎನ್ಎಸ್ ತುಘ್ರಿಲ್ ಮೊದಲನೆಯದಾಗಿದ್ದು ಚೀನಾ ರಫ್ತು ಮಾಡಿರುವ ಅತ್ಯಾಧುನಿಕ ಮತ್ತು ಬೃಹತ್ ಯುದ್ಧನೌಕೆಯಾಗಿದೆ. ಚೀನಾವು ಪಾಕಿಸ್ತಾನದೊಂದಿಗೆ ಸರ್ವಋತು ವ್ಯೆಹಾತ್ಮಕ ಸಂಬಂಧ ಹೊಂದಿದ್ದು ಆ ದೇಶಕ್ಕೆ ಅತ್ಯಧಿಕ ಶಸ್ತ್ರಾಸ್ತ್ರ ಪೂರೈಸುವ ದೇಶವಾಗಿದೆ. ಅತ್ಯಾಧುನಿಕ ಯುದ್ಧನೌಕೆಗಳಲ್ಲದೆ ಜೆಎಫ್-17 ಥಂಡರ್ ಯುದ್ಧವಿಮಾನ ನಿರ್ಮಿಸಲು ಪಾಕಿಸ್ತಾನದ ವಾಯುಪಡೆಗೆ ನೆರವಾಗುತ್ತಿದೆ.