ಇಂಗ್ಲೆಂಡ್- ನ್ಯೂಝಿಲ್ಯಾಂಡ್ ಹಣಾಹಣಿ

Update: 2021-11-09 18:38 GMT
photo:twitter

ಅಬುಧಾಬಿ, ನ. 9: ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ ಬುಧವಾರ ಇಂಗ್ಲೆಂಡ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್ ಮತ್ತು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ನ್ಯೂಝಿಲ್ಯಾಂಡ್ ನಡುವಿನ ಹಣಾಹಣಿ ಕುತೂಹಲ ಕೆರಳಿಸಿದೆ.

ಪಂದ್ಯಾವಳಿ ಆರಂಭಗೊಳ್ಳುವ ಮೊದಲು, ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು ಹಾಗೂ ಸೂಪರ್ 12 ಹಂತದ ಹೆಚ್ಚಿನ ಪಂದ್ಯಗಳನ್ನು ಅದೇ ರೀತಿಯಲ್ಲಿ ಆಡಿತು. ಆದರೆ, ದಕ್ಷಿಣ ಆಫ್ರಿಕ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿತು.

ಈಗ ಇಂಗ್ಲೆಂಡ್ ತಂಡವನ್ನು ಗಾಯದ ಸಮಸ್ಯೆ ಕಾಡುತ್ತಿದೆ. ತಂಡದ ಆರಂಭಿಕ ಬ್ಯಾಟರ್ ಜೇಸನ್ ರಾಯ್ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದ ವೇಳೆ ಮೀನಖಂಡದ ಗಾಯಕ್ಕೆ ಒಳಗಾಗಿ ಕೂಟದಿಂದ ಹೊರಬಿದ್ದಿದ್ದಾರೆ. ಇದು ಸೆಮಿಫೈನಲ್‌ನಲ್ಲಿ ಹೋರಾಡಲಿರುವ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ರಾಯ್ ಮತ್ತು ಜೋಸ್ ಬಟ್ಲರ್ ಈ ಪಂದ್ಯಾವಳಿಯಲ್ಲಿ ಅತ್ಯಂತ ಬಲಿಷ್ಠ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದ್ದಾರೆ.

ರಾಯ್ ಸ್ಥಾನದಲ್ಲಿ ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ.

ತೊಡೆಯ ಗಾಯಕ್ಕೆ ಒಳಗಾಗಿ ಬೌಲರ್ ಟೈಮಲ್ ಮಿಲ್ಸ್ ಕೂಡ ಹೊರಬಿದ್ದಿರುವುದು ತಂಡದ ಕಳವಳಕ್ಕೆ ಕಾರಣವಾಗಿದೆ.

ಅದೇ ವೇಳೆ, ಐಸಿಸಿ ಪಂದ್ಯಾವಳಿಗಳಲ್ಲಿ ನ್ಯೂಝಿಲ್ಯಾಂಡ್ ಸ್ಥಿರ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಅದು ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಈ ಪಂದ್ಯಾವಳಿಯಲ್ಲಿ ನ್ಯೂಝಿಲ್ಯಾಂಡ್ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನುನೀಡುತ್ತಾ ಬಂದಿದೆ. ಸೂಪರ್ 12ರ ಹಂತದ ಪಂದ್ಯದಲ್ಲಿ ಅದು ಭಾರತವನ್ನು 110 ರನ್‌ಗಳಿಗೆ ನಿಯಂತ್ರಿಸಿದ್ದು ಅದರ ಬೌಲಿಂಗ್‌ಪಾರಮ್ಯಕ್ಕೆ ಸಾಕ್ಷಿಯಾಗಿದೆ. ಸೂಪರ್ 12 ಹಂತದಲ್ಲಿ ಅದುಪಾಕಿಸ್ತಾನದ ವಿರುದ್ಧ ಮಾತ್ರ ಸೋಲನುಭವಿಸಿದೆ. ಟ್ರೆಂಟ್ ಬೋಲ್ಟ್‌ಮತ್ತು ಟಿಮ್ ಸೌತೀ ನ್ಯೂಝಿಲ್ಯಾಂಡ್‌ನ ಪ್ರಭಾವಿ ಬೌಲಿಂಗ್‌ಶಕ್ತಿಗಳಾಗಿದ್ದಾರೆ.

ಆರಂಭಿಕ ಮಾರ್ಟಿನ್ ಗಪ್ಟಿಲ್ ನ್ಯೂಝಿಲ್ಯಾಂಡ್‌ನ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News