×
Ad

ಕಾಮಿಡಿಯನ್ ಮುನವ್ವರ್ ಫಾರೂಖಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಪ್ರತಿಭಟನೆ: ವಿಹಿಂಪ, ಬಜರಂಗದಳ ಎಚ್ಚರಿಕೆ

Update: 2021-11-10 14:42 IST
Photo: Instagram/munawar.faruqui

ಹೊಸದಿಲ್ಲಿ: ಕಾಮಿಡಿಯನ್ ಮುನವ್ವರ್ ಫಾರೂಖಿ ಅವರು ನವೆಂಬರ್ 14ರಂದು ರಾಯಪುರ್‍ನಲ್ಲಿ ನಡೆಸಲಿದ್ದಾರೆನ್ನಲಾದ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಜಿಲ್ಲಾಡಳಿತಕ್ಕೆ ನೀಡಿವೆ. ಕಾರ್ಯಕ್ರಮವನ್ನು ಮುನವ್ವರ್ ರದ್ದುಪಡಿಸದೇ ಇದ್ದರೆ ಅದನ್ನು ನಿಲ್ಲಿಸುವುದಾಗಿಯೂ ಹಿಂದು ಸಂಘಟನೆಗಳು ಬೆದರಿಕೆಯೊಡ್ಡಿವೆ.

 ಸೋಮವಾರ ವಿಹಿಂಪ ಮತ್ತು ಬಜರಂಗದಳ ಸದಸ್ಯರು ಸೋಮವಾರ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಕಾರ್ಯಕ್ರಮ ರದ್ದುಪಡಿಸಲು ಕೋರಿದ್ದಾರೆ.

"ಫಾರೂಖಿ ನಮ್ಮ ದೇವರುಗಳನ್ನು ಹಿಂದೆ ವ್ಯಂಗ್ಯವಾಡಿದ್ದಾರೆ. ಇಂತಹ ಹಿಂದು-ವಿರೋಧಿ ಜನರನ್ನು ಇಲ್ಲಿಗೆ ಅನುಮತಿಸಬಾರದು. ಅನುಮತಿಸಿದರೆ ಅದು ಆಡಳಿತದ ಜವಾಬ್ದಾರಿ ಏಕೆಂದರೆ ನಾವು ನಮ್ಮದೇ ವಿಧದಲ್ಲಿ ಕಾರ್ಯಕ್ರಮವನ್ನು ನಿಲ್ಲಿಸುತ್ತೇವೆ" ಎಂದು ವಿಹಿಂಪ ನಾಯಕ ಸಂತೋಷ್ ಚೌಧುರಿ ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಸ್ಥಳೀಯಾಡಳಿತ ಇನ್ನಷ್ಟೇ ಅನುಮತಿ ನೀಡಬೇಕಿದೆ ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ. ಈ ಕುರಿತು ಮಾತನಾಡಿದ ರಾಯಪುರ್ ಕಲೆಕ್ಟರ್ ಸೌರಭ್ ಕುಮಾರ್ "ಕಾರ್ಯಕ್ರಮಕ್ಕೆ ಅನುಮತಿ ಕೋರಿ ಅರ್ಜಿ ಬಂದಿದೆ. ಹೋಟೆಲ್ ಒಂದರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವಂತೆಯೂ ಸಂಘಟಕರು ಕೋರಿದ್ದಾರೆ. ಪೊಲೀಸ್ ಅನುಮತಿಗಾಗಿ ಅರ್ಜಿಯನ್ನು ಕಳುಹಿಸಲಾಗಿದೆ" ಎಂದಿದ್ದಾರೆ.

ಹಿಂದು ಸಂಘಟನೆಗಳಿಂದ ಬೆದರಿಕೆಯ ನಂತರ ಕಳೆದ ತಿಂಗಳು ಫಾರೂಖಿ ಅವರ ಎರಡು ಕಾರ್ಯಕ್ರಮಗಳು ರದ್ದುಗೊಂಡಿದ್ದವು.

ಈ ವರ್ಷಾರಂಭದಲ್ಲಿ ಇಂದೋರ್‍ನಲ್ಲಿನ ಕಾರ್ಯಕ್ರಮವೊಂದರ ಪೂರ್ವತಯಾರಿ ವೇಳೆ ಫಾರೂಖಿ ಅವರು ಹಿಂದು ದೇವರುಗಳ ಕುರಿತಂತೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತಂತೆ  ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಬಿಜೆಪಿ ಶಾಸಕರೊಬ್ಬರ ಪುತ್ರ ದೂರಿ ಸೂಕ್ತ ಪುರಾವೆಗಳನ್ನು ಒದಗಿಸದೇ ಇದ್ದರೂ ಕಾರ್ಯಕ್ರಮ ನಡೆಯುವ ಮುನ್ನವೇ ಫಾರೂಖಿ ಅವರನ್ನು ಬಂಧಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News