ಪದವಿ ಶಿಕ್ಷಣವೇ ಸ್ವಾವಲಂಬಿ ಬದುಕಿನ ಮೆಟ್ಟಿಲು: ಎನ್.ಶಶಿಕುಮಾರ್
ಮಂಗಳೂರು, ನ.10: ಸ್ವಾವಲಂಬನೆಯ ಬದುಕಿಗೆ ಪದವಿ ಶಿಕ್ಷಣವೇ ಮೊದಲ ಮೆಟ್ಟಿಲು. ಪದವಿ ಶಿಕ್ಷಣವನ್ನು ಪೂರೈಸುವುದೆಂದರೆ ಸ್ವತಂತ್ರ ಜೀವನದ ಆರಂಭ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತಎನ್. ಶಶಿಕುಮಾರ್ ಹೇಳಿದ್ದಾರೆ.
ಇವರು ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ 2021-22ರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಓರಿಯೆಂಟೇಷನ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕನಸುಗಳು ಇರುವುದು ಸಾಧಿಸುವುದಕ್ಕೆ ಹೊರತು ಹೇಳಿಕೊಂಡು ಓಡಾಡುವುದಕ್ಕಲ್ಲ. ಕನಸುಗಳನ್ನು ನನಸು ಮಾಡಿಕೊಳ್ಳುವುದರ ಕಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ನೀಡಬೇಕು. ಸರಿಯಾದ ಗುರಿ ಮತ್ತು ಮಾರ್ಗದರ್ಶನಗಳು ಇದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ನಂತರ ಸುಮಾರು 90 ನಿಮಿಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷಗಳ ತಯಾರಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್‌ಎಂಎಎಂಐಟಿ ಪ್ರಾಂಶುಪಾಲ ಪ್ರೊ.ನಿರಂಜನ್ ಚಿಪ್ಲೊಂಕರ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಕ್ಯಾಂಪಸ್ ನ ಕುಲಸಚಿವ ಯೋಗೀಶ್ ಹೆಗ್ಡೆ ವಹಿಸಿದ್ದರು.
ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ. ಅತಿಥಿ ಗಣ್ಯರನ್ನು ಸ್ವಾಗತಿಸಿ , ಹೊಸ ವಿದ್ಯಾರ್ಥಿಗಳಿಗೆ ನಿಟ್ಟೆ ಶಿಕ್ಷಣ ಸಂಸ್ಥೆಯ ಪರಿಚಯವನ್ನು ಮಾಡಿಕೊಟ್ಟರು. ಪ್ರೊ. ರಮೇಶ್ ವಂದಿಸಿದರು. ಉಪನ್ಯಾಸಕ ಸಚಿನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.