×
Ad

ವಿಧಾನ ಪರಿಷತ್ ಚುನಾವಣೆ ಸ್ಪರ್ಧಿಸುವ ಬಗ್ಗೆ 2-3 ದಿನಗಳಲ್ಲಿ ನಿರ್ಧಾರ: ಡಾ.ಎಂ.ಎನ್.ರಾಜೇಂದ್ರ ಕುಮಾರ್

Update: 2021-11-10 18:36 IST

ಉಡುಪಿ, ನ.10: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡಗಳು ಬರುತ್ತಿದ್ದು, ಈ ಬಗ್ಗೆ ಎರಡು ಮೂರು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದರೆ ನಾನು ಯಾವುದೇ ಪಕ್ಷದಿಂದ ಸ್ಪರ್ಧಿಸುವುದಿಲ್ಲ. ಸ್ಪರ್ಧಿಸುವುದಾದರೆ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತೇನೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನನಗೆ ಒತ್ತಡ ಬರುತ್ತಿರುವುದು ನಿಜ. ಇದು ಪಕ್ಷಗಳ ಮಧ್ಯೆ ನಡೆಯುವ ಚುನಾವಣೆಯಾಗಿದೆ. ನಾನು ಎಲ್ಲ ಪಕ್ಷಗಳ ಮಧ್ಯೆ ಇದ್ದೇನೆ. ಹಾಗಾಗಿ ಸ್ಪರ್ಧಿಸುವ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ನಾಮಪತ್ರ ಸಲ್ಲಿಸುವುದಿದ್ದರೆ ಕೊನೆಯ ದಿನವಾದ ನ.17ಕ್ಕೆ ಸಲ್ಲಿಸುತ್ತೇನೆ. ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್ತಿನಲ್ಲಿ ಕನಿಷ್ಟ ಎರಡು ಸ್ಥಾನವನ್ನಾದರೂ ನೀಡಬೇಕು ಎಂದು ಹೇಳಿದರು.

ಈ ಹೇಳಿಕೆ ನೋಡಿ ಪಕ್ಷದವರು ಕರೆದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದವರು ನನ್ನನ್ನು ಕರೆಯುತ್ತಾರೆ. ಆದರೆ ಹೋಗಬೇಕೆ ಬೇಡವೇ ಎಂಬುದು ನನ್ನ ಇಷ್ಟ. ಆದರೆ ನಾನು ಯಾವುದೇ ಪಕ್ಷದ ಅಡಿಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಇದ್ದೆ. ಈಗ ಎಲ್ಲಿಯಾದರೂ ಆ ಪಕ್ಷದಲ್ಲಿ ನನ್ನನ್ನು ನೋಡಿದ್ದೀರ? ಯಾವ ಪಕ್ಷದಲ್ಲಿಯೂ ನಾನು ಈಗ ಕಾಣಿಸಿಕೊಳ್ಳುತ್ತಿಲ್ಲ. ನಾನು ಸಹಕಾರಿಯಾಗಿಯೇ ಇದ್ದೇನೆ ಎಂದು ತಿಳಿಸಿದರು.

ನವೋದಯ ಸದಸ್ಯರು, ಗ್ರಾಪಂ ಸದಸ್ಯರು ಹಾಗೂ ಸಹಕಾರಿಗಳು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಇರುವ ಶೇ.50ರಷ್ಟು ಮಂದಿ ಗ್ರಾಪಂ ಸದಸ್ಯರುಗಳಾಗಿದ್ದಾರೆ. ಇದರಲ್ಲಿ ಶೇ.30ರಷ್ಟು ಮಂದಿ ಮಹಿಳೆಯರು ನವೋದಯ ಸೇರಿದಂತೆ ಇತರ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಆದುದ ರಿಂದ ಇವರೆಲ್ಲರು ಸಹಕಾರಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗಲಿ ಎಂಬ ಉದ್ದೇಶದಿಂದ ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇವರು ಸ್ಪರ್ಧೆ ಮಾಡುವಂತೆ ಹೇಳಿದ್ದರೆಯೇ ಹೊರತು ಯಾರು ಕೂಡ ಪಕ್ಷದಿಂದ ಸ್ಪರ್ಧಿಸಿ ಎಂದು ಹೇಳಿಲ್ಲ ಎಂದರು.

ನೀವು ಸ್ಪರ್ಧಿಸಿದರೆ ಫಲಿತಾಂಶದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಮತದಾರರ ಮೇಲೆ ಬಿಟ್ಟ ವಿಚಾರ. ನಾನು ಎಲ್ಲೂ ರಾಜಕೀಯ ಮಾಡುವುದಿಲ್ಲ. ಸಹಕಾರಿ, ಬಡವರ, ಸ್ವಸಹಾಯ ಸಂಘಗಳ ಗುಂಪುಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News