ಪ್ರೌಢಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ
ಮಣಿಪಾಲ ನ. 10: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಕೆನರಾ ಬ್ಯಾಂಕ್ ಜುಬಲಿ ಎಜುಕೇಶನ್ ಫಂಡ್ ಬೆಂಗಳೂರು, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ (ಡಯಟ್) ಉಡುಪಿ, ರಮೇಶ್ ಯು ಪೈ ಮಾನವ ಸಂಪನ್ಮೂಲಾಭಿವೃದ್ಧಿ ಕೇಂದ್ರ ಮಣಿಪಾಲ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಇವುಗಳ ಸಹಯೋಗ ದೊಂದಿಗೆ ಉಡುಪಿ ಹಾಗೂ ಕಾಪು ತಾಲೂಕಿನ ಅನುದಾನರಹಿತ ಪ್ರೌಢಶಾಲಾ ಶಿಕ್ಷಕರಿಗೆ ಎರಡು ದಿನಗಳ ಶೈಕ್ಷಣಿಕ ಕಾರ್ಯಗಾರ ಬುಧವಾರ ಪ್ರಾರಂಭ ಗೊಂಡಿತು.
ತರಬೇತಿಯನ್ನು ಉದ್ಘಾಟಿಸಿದ ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದರೆ ಶಿಕ್ಷಣ ಮಟ್ಟವು ಎತ್ತರಕ್ಕೆ ಎರಬಹುದೆಂದು ಎಲ್ಲರ ಆಶಯವಾಗಿದೆ. ಇದಕ್ಕಾಗಿ ಕೇವಲ ಹೊಸ ನೀತಿ ಜಾರಿಗೆ ಬಂದರೆ ಸಾಲದು, ಹೆತ್ತವರ, ವಿದ್ಯಾರ್ಥಿ ಗಳ, ಶಿಕ್ಷಕರ, ಮನಸ್ಥಿತಿ ಬದಲಾವಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಡಯಟ್ ಸಂಸ್ಥೆಯ ಉಪ ಪ್ರಾಂಶುಪಾಲ ಡಾ.ಆಶೋಕ ಕಾಮತ್ ಮಾತನಾಡಿ, ತರಬೇತಿಯ ಅವಶ್ಯಕತೆಯ ಬಗ್ಗೆ ತಿಳಿಸಿದರು. ಡಯಟ್ ಉಪನ್ಯಾಸಕ ಚಂದ್ರ ನಾಯಕ, ಉಡುಪಿ ಜಿಲ್ಲಾ ಬಿಇಓ ನಾಗೇಂದ್ರಪ್ಪ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿ, ಮುಖ್ಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.