‘ಕನ್ನಡ ಮಾಧ್ಯಮ ಶಾಲೆಗಳು ಆಧುನಿಕ ಶಿಕ್ಷಣದತ್ತ ಮುಖ ಮಾಡಬೇಕು’
ಉದ್ಯಾವರ, ನ.10: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳ ಕಾರಣದಿಂದಾಗಿ ಸವಾಲನ್ನು ಎದುರಿಸುತ್ತಿವೆ. ಇದನ್ನು ಸಶಕ್ತವಾಗಿ ಎದುರಿಸಲು ಕನ್ನಡ ಮಾಧ್ಯಮ ಶಾಲೆಗಳೂ ಆಧುನಿಕ ಶಿಕ್ಷಣದ ಆಯಾಮಗಳನ್ನು ತಮ್ಮಲ್ಲಿ ಅಳವಡಿಸಿ ಕೊಂಡು ಸಶಕ್ತಗೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್‌ನ ಉಡುಪಿ ರೀಜನಲ್ ಕಚೇರಿಯ ಎಜಿಎಂ ರಾಜಗೋಪಾಲ ಬಿ. ಹೇಳಿದ್ದಾರೆ.
ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ಕೊಡಮಾಡಿದ ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕನ್ನಡ ಶಾಲೆಗಳು ತಮ್ಮ ಶಿಕ್ಷಣಕ್ರಮದಲ್ಲಿ ಆಧುನಿಕತೆಯನ್ನು ಅಳವಡಿಸಿ ಕೊಳ್ಳಬೇಕು. ಮಾಧ್ಯಮಗಳೆಂಬುದು ಬೌದ್ಧಿಕತೆಯ ಸಂಕೇತವಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಧನೆಗಳನ್ನು ಮಾಡಲು ಸಾಧ್ಯಲ್ಲ ಎಂಬ ಹುಂಬತನವನ್ನು ಬಿಟ್ಟು ನಾವು ಸುತ್ತ ನೋಡಿದರೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರ ಸಾಧನೆಗಳು ಕಾಣಿಸುತ್ತವೆ. ಕನ್ನಡದ ವಿದ್ಯಾರ್ಥಿಗಳು, ಹೆತ್ತವರು ಕೀಳರಿಮೆಯನ್ನು ತೊಡೆದು ಹಾಕಬೇಕು ಎಂದವರು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕ್ ಉಡುಪಿ ಕನ್ನರ್ಪಾಡಿ ಶಾಖೆಯ ಪ್ರಬಂಧಕ ಮಂಜುನಾಥ ಮಾತನಾಡಿ ಡಿಜಿಟಲ್ ಇಂಡಿಯಾ ಚಾಲ್ತಿಯಲ್ಲಿರುವ ಈ ಹೊತ್ತು ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಅದನ್ನು ಕಲಿಯಲು ನಾವು ಮನಸ್ಸು ಮಾಡದಿದ್ದರೆ ಬೆಳೆಯುತ್ತಿರುವ ಸಮಾಜದೊಂದಿಗೆ ನಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯ ವಾಗುವುದಿಲ್ಲ ಎಂದರು.
ಶಾಲಾಡಳಿತ ಸಮಿತಿ ಸದಸ್ಯರಾದ ಯು.ಬಿ. ಶ್ರೀನಿವಾಸ್, ಯು. ಪ್ರತಾಪ್ ಕುಮಾರ್, ಯು. ರಾಜೇಂದ್ರ ಮಯ್ಯ, ಕೃಷ್ಣಕುಮಾರ್ ರಾವ್, ಡಾ. ತ್ರಿವೇಣಿ, ಉದ್ಯಾವರ ನಾಗೇಶ್ ಕುಮಾರ್ ಮತ್ತು ಉದ್ಯಾವರ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ರಶೀದ್ ರಹ್ಮಾನ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ್ ವಹಿಸಿದ್ದರು. ಶಾಲಾ ಸಂಚಾಲಕ ಸುರೇಶ್ ಶೆಣೈ ಯು. ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ವಂದಿಸಿದರು. ಶಾಲಾ ಸಹ ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರ್ವಹಿಸಿದರು.