ಮಂಗಳೂರು; ಲಾರಿ ಢಿಕ್ಕಿ : ದ್ವಿಚಕ್ರ ವಾಹನ ಸವಾರೆ ಮೃತ್ಯು
Update: 2021-11-10 21:13 IST
ಮಂಗಳೂರು, ನ.10: ಸಿಮೆಂಟ್ ಮಿಕ್ಸಿಂಗ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಪಡೀಲ್‌ನಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರನ್ನು ಪೂರ್ಣಿಮಾ (34) ಎಂದು ಗುರುತಿಸಲಾಗಿದೆ.
ನಗರದ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾರುವ ಪೂರ್ಣಿಮಾ ಎಂದಿನಂತೆ ಕೆಲಸ ಮುಗಿಸಿ ಕಾವೂರಿನ ತನ್ನ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಪೂರ್ಣಿಮಾ ಆಸ್ಪತ್ರೆ ಸೇರಿಸುವ ಮೊದಲೇ ಮೃತಪಟ್ಟಿದ್ದಾರೆ.
ಪೂರ್ಣಿಮಾ ಪತಿ ಹಾಗೂ 3 ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಸ್ಥಳ: ಪಡೀಲ್ ಕೆಂಬಾರ್ ಬಳಿಯ ತಿರುವಿನಲ್ಲಿ ಆಗಾಗ್ಗೆ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಹೆದ್ದಾರಿಯಿಂದಾಗಿ ಇದು ಅಪಾಯಕಾರಿ ಸ್ಥಳವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬುಧವಾರ ಇದೇ ಸ್ಥಳದಲ್ಲಿ ಎರಡು ಅಪಘಾತಗಳು ಸಂಭವಿಸಿವೆ.