ಬಾಂಗ್ಲಾ: ಮಾಜಿ ಮುಖ್ಯ ನ್ಯಾಯಾಧೀಶರಿಗೆ ಜೈಲುಶಿಕ್ಷೆ
ಢಾಕ, ನ.10: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಸುರೇಂದ್ರ ಕುಮಾರ್ ಸಿನ್ಹಾರಿಗೆ 11 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಹಣ ಅಕ್ರಮ ವರ್ಗಾವಣೆ ಅಪರಾಧಕ್ಕೆ 7 ವರ್ಷ, ವಿಶ್ವಾಸ ದ್ರೋಹ ಅಪರಾಧಕ್ಕೆ 4 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಢಾಕಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶೇಖ್ ನಝ್ಮಲ್ ಆಲಮ್ ತೀರ್ಪು ಘೋಷಿಸಿದರು. ದೇಶದಲ್ಲಿ ಯಾರು ಕೂಡಾ ಕಾನೂನಿಗಿಂತ ಮಿಗಿಲಲ್ಲ ಎಂಬುದನ್ನು ಈ ತೀರ್ಪು ತೋರಿಸಿಕೊಟ್ಟಿದೆ. ತಪ್ಪು ಮಾಡಿದವರು ಯಾರೇ ಆದರೂ ವಿಚಾರಣೆ ಎದುರಿಸಬೇಕು ಎಂದು ಅಭಿಯೋಜಕ ಖುರ್ಷಿದ್ ಆಲಮ್ ಖಾನ್ ಹೇಳಿದ್ದಾರೆ. 2017ರಲ್ಲಿ ದೇಶಬಿಟ್ಟಿರುವ ಸುರೇಂದ್ರ ಕುಮಾರ್ ಈಗ ಉತ್ತರ ಅಮೆರಿಕಾದಲ್ಲಿ ನೆಲೆಸಿದ್ದು ಅಲ್ಲಿ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿದೆ. ನ್ಯಾಯಾಧೀಶರನ್ನು ಉಚ್ಛಾಟಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು 2017ರಲ್ಲಿ ಸುರೇಂದ್ರ ಕುಮಾರ್ ಮುಖ್ಯನ್ಯಾಯಾಧೀಶರಾಗಿದ್ದ ಸಂದರ್ಭ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಯ ರಕ್ಷಣೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ತೀರ್ಪು ಎಂದು ನ್ಯಾಯವಾದಿಗಳು ಶ್ಲಾಘಿಸಿದ್ದರು. ತೀರ್ಪು ನೀಡಿದ ಬಳಿಕ ಪದತ್ಯಾಗ ಮಾಡುವಂತೆ ತನ್ನ ಮೇಲೆ ತೀವ್ರ ಒತ್ತಡ ವಿಧಿಸಲಾಗಿದೆ ಆರೋಪಿಸಿದ್ದ ಸಿನ್ಹಾ, ದೇಶ ಬಿಟ್ಟು ತೆರಳಿದ್ದರು. ಖಾಸಗಿ ಬ್ಯಾಂಕ್‌ನ ಸಿಬಂದಿಗಳ ನೆರವಿನಿಂದ ಸುಮಾರು 4,71,000 ಡಾಲರ್ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದಲ್ಲಿ ಸಿನ್ಹಾ ವಿರುದ್ಧ ಢಾಕದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸಿನ್ಹಾ ಅಪರಾಧ ಸಾಬೀತಾಗಿದೆ. . ಇದೇ ಪ್ರಕರಣಕ್ಕೆ ಸಂಬಂಧಿಸಿ ಇತರ 8 ಆರೋಪಿಗಳಿಗೂ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಗೆ ನೇಮಕಗೊಂಡಿರುವ ಪ್ರಥಮ ಹಿಂದು ಮುಖ್ಯನ್ಯಾಯಾಧೀಶರಾಗಿದ್ದಾರೆ ಸುರೇಂದ್ರ ಕುಮಾರ್ ಸಿನ್ಹ.