×
Ad

ವಿಧಾನ ಪರಿಷತ್ ಚುನಾವಣೆ; ದ.ಕ., ಉಡುಪಿಯಲ್ಲಿ 389 ಮತಗಟ್ಟೆ, 5,914 ಮತದಾರರು

Update: 2021-11-10 22:31 IST

ಮಂಗಳೂರು, ನ.10: ವಿಧಾನ ಪರಿಷತ್ ಸದಸ್ಯರ ಅಧಿಕಾರ ಅವಧಿಯು 2022ರ ಜನವರಿ 5ರಂದು ಅಂತ್ಯಗೊಳ್ಳಲಿದ್ದು, ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಡಿ.10ಕ್ಕೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ 389 ಮತಗಟ್ಟೆಯಲ್ಲಿ 5,914 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

ನ.16ರಂದು ಅಧಿಸೂಚನೆ ಹೊರಬೀಳಲಿದೆ. ನ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂದಕ್ಕೆ ಪಡೆಯಲು ನ.26 ಕೊನೆಯ ದಿನವಾಗಿದೆ. ಡಿ.10ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಡಿ.14ರಂದು ಫಲಿತಾಂಶ ಪ್ರಕಟವಾಗಲಿದೆ. ಡಿ.16ರ ವೇಳೆಗೆ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ದ.ಕ. ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

ವೀಡಿಯೊ ನಿಗಾ ತಂಡ ರಚನೆ

ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಸಭೆಗಳನ್ನು ವೀಡಿಯೊ ಮಾಡಲು ಮತ್ತು ಮಂತ್ರಿಗಳು, ಇತರ ಪ್ರಮುಖ ರಾಜಕೀಯ ಪಕ್ಷಗಳ, ಕಾರ್ಯಕರ್ತರ ಭೇಟಿಗಳನ್ನು ದಾಖಲಿಸಲು ಪ್ರತಿ ತಾಲೂಕಿಗೆ ವಿಶೇಷ ವೀಡಿಯೊ ತಂಡವನ್ನು ಜಿಲ್ಲಾಧಿಕಾರಿ ರಚಿಸಬೇಕು. ಚುನಾವಣಾ ಆಯೋಗದ ವೀಕ್ಷಕರು ಅದೇ ದಿನದ ಸಂಜೆ ವೀಡಿಯೊ ರೆಕಾರ್ಡಿಂಗ್ ಅನ್ನು ವೀಕ್ಷಿಸಿ ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಯ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು.

ಯಾರಿಗೆ ಮತದಾನ ಹಕ್ಕು

ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಹಾಗೂ ನಾಮನರ್ದೇಶಿತ ಸದಸ್ಯರು, ಲೋಕಸಭಾ, ರಾಜ್ಯಸಭಾ ಸದಸ್ಯರು ಹಾಗೂ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮತದಾನ ಮಾಡುವ ಹಕ್ಕು ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News