ಯುರೋಪ್ ವಲಯದಲ್ಲಿ ಮತ್ತೆ ಕೊರೋನ ಸೋಂಕು ಉಲ್ಬಣ: ವಿಶ್ವ ಆರೋಗ್ಯ ಸಂಸ್ಥೆ

Update: 2021-11-10 17:14 GMT

ನ್ಯೂಯಾರ್ಕ್, ನ.10: ವಿಶ್ವದಲ್ಲಿ ಯುರೋಪ್ ವಲಯದಲ್ಲಿ ಮಾತ್ರ ಕೊರೋನ ಸೋಂಕಿನ ಪ್ರಕರಣ ಹಾಗೂ ಸಾವಿನ ಪ್ರಕರಣ ಅವಿರತವಾಗಿ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ. ಈ ವಾರ ವಿಶ್ವದಾದ್ಯಂತ 31 ಲಕ್ಷ ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಇದರಲ್ಲಿ 19 ಲಕ್ಷ ಪ್ರಕರಣ ಯುರೋಪ್ನಲ್ಲೇ ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಯುರೋಪ್ನಲ್ಲಿ ಸಾವಿನ ಪ್ರಕರಣದಲ್ಲಿ 10% ಏರಿಕೆಯಾಗಿದೆ. ಜರ್ಮನಿ ಮತ್ತು ಬ್ರಿಟನ್ನಲ್ಲಿ ಅತೀ ಹೆಚ್ಚಿನ ಕೊರೋನ ಸೋಂಕು ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜರ್ಮನಿಯಲ್ಲಿ ಕಳೆದ ಗುರುವಾರ 33,949 ಹೊಸ ಪ್ರಕರಣ ದಾಖಲಾಗಿದ್ದು 2020ರ ಜನವರಿಯಿಂದ ಇದುವರೆಗಿನ ಅತ್ಯಧಿಕ ಸೋಂಕು ಪ್ರಕರಣ ಇದಾಗಿದೆ. ನಿಧಾನಗತಿಯ ಲಸಿಕೀಕರಣ ಪ್ರಕ್ರಿಯೆ ಸೋಂಕು ಹೆಚ್ಚಳಕ್ಕೆ ಮೂಲಕಾರಣ ಎಂದು ಜರ್ಮನಿಯ ಸಚಿವರು ಹೇಳಿದ್ದಾರೆ. ಅಮೆರಿಕನ್ ಖಂಡದಲ್ಲಿ ಹೊಸ ಸೋಂಕು ಪ್ರಕರಣ 5%ದಷ್ಟು ಮತ್ತು ಸಾವಿನ ಪ್ರಕರಣ 4%ದಷ್ಟು ಕಡಿಮೆಯಾಗಿದೆ. ಆದರೆ ಬುಧವಾರ ಅಮೆರಿಕದಲ್ಲಿ 74,834 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಲಸಿಕೆ ಪಡೆಯದವರು ಕೊರೋನ ಸೋಂಕಿನಿಂದ ಮೃತರಾಗುವ ಅಪಾಯ ಹೆಚ್ಚು ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ಏಶ್ಯಾ ಮತ್ತು ಆಫ್ರಿಕಾದ ಹಲವು ದೇಶಗಳಲ್ಲಿ ಲಸಿಕೆಯ ಕೊರತೆ ಎದುರಾಗಿದ್ದರೂ ಈ ವಲಯದಲ್ಲಿ ಕೊರೋನ ಸೋಂಕಿನ ಸಾವಿನ ಪ್ರಕರಣ 33%ದಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಯುರೋಪ್ ಕೊರೋನ ಸಾಂಕ್ರಾಮಿಕದ ಕೇಂದ್ರ ಬಿಂದುವಿನಲ್ಲಿದೆ. ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಯುರೋಪ್ ವಲಯದಲ್ಲಿ ಇನ್ನೂ 5 ಲಕ್ಷ ಸಾವು ಸಂಭವಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಡಾ. ಹ್ಯಾನ್ಸ್ ಕ್ಲೂಗ್ ಕಳೆದ ವಾರ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News