×
Ad

ಮಂಗಳೂರು; ನಕಲಿ ಚೆಕ್ ನೀಡಿ ವಂಚನೆ ಪ್ರಕರಣ ಸಾಬೀತು: 2.50 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಲಯ ತೀರ್ಪು

Update: 2021-11-10 22:47 IST

ಮಂಗಳೂರು, ನ.10: ನಕಲಿ ಚೆಕ್ ನೀಡಿ ಮೋಸ ಮಾಡಿರುವ ಪ್ರಕರಣ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ವಂಚನೆಗೊಳಗಾದ ವ್ಯಕ್ತಿಗೆ 2.50 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ.

ಉದ್ಯಮಿ ರಾಮಕೃಷ್ಣ ಕಾಮತ್ ಮತ್ತು ಉಲ್ಲಾಸ್ ರೈಗೆ ಹಣದ ವ್ಯವಹಾರದಲ್ಲಿ ತಕರಾರು ಇದ್ದು, 30 ಸಾವಿರ ರೂ. ಉಲ್ಲಾಸ್ ರೈ ಕೊಡಲು ಬಾಕಿ ಇತ್ತು. ಇದನ್ನು ಚೆಕ್ ರೂಪದಲ್ಲಿ ನೀಡಿದ್ದು, ರಾಮಕೃಷ್ಣ ಕಾಮತ್ ಬ್ಯಾಂಕ್‌ಗೆ ನಗದೀಕರಿಸಲು ಹೋದಾಗ ಆ ಚೆಕ್ ನಕಲಿಯಾಗಿದ್ದ ಕಾರಣ ಬೌನ್ಸ್ ಬಂದಿತ್ತು. ಉಲ್ಲಾಸ ರೈ ಮೋಸ ಮಾಡಿರುವುದಾಗಿ ಕಾಮತ್ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯದ ಆದೇಶದಂತೆ 2007 ಎ.23ರಂದು ಪ್ರಕರಣ ದಾಖಲಿಸಿ, ಅರೋಪಿಯನ್ನು ಬಂಧಿಸಿ, ತನಿಖೆ ನಡೆಸಿದ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಕಲಂ 417 ಐಪಿಸಿ ಅಡಿ 5 ಸಾವಿರ ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ, ಕಲಂ 420 ಐಪಿಸಿ ಅಡಿ 1 ವರ್ಷ ಸಾದಾ ಸಜೆ, ಜೊತೆಗೆ 5 ಸಾವಿರ ರೂ. ದಂಡ, ತಪ್ಪಿದರೆ 3 ತಿಂಗಳ ಸಾದಾ ಸಜೆ ಹಾಗು 2.50 ಲಕ್ಷ ರೂ. ರಾಮಕೃಷ್ಣ ಕಾಮತ್ ಅವರಿಗೆ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಧೀಶೆ ಅಂಜಲಿ ಶರ್ಮಾ ತೀರ್ಪು ನೀಡಿದ್ದಾರೆ.

ಉರ್ವ ಪೊಲೀಸ್ ಠಾಣೆಯ ಅಂದಿನ ಪಿಎಸ್ಸೈ ಎಂ.ಎನ್.ರಾವ್ ಪ್ರಕರಣ ದಾಖಲಿಸಿ, ಸಾಕ್ಷಿದಾರರ ಹೇಳಿಕೆ ಪಡೆದಿದ್ದರು. ಪಿಎಸ್ಸೈ ನವೀನ್‌ ಚಂದ್ರ ಜೋಗಿ ಆರೋಪಿಯನ್ನು ಬಂಧಿಸಿದ್ದರು. ಪಿಎಸ್ಸೈ ಸುರೇಶ್ ಪಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಗೀತಾ ರೈ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News