ಪೇಜಾವರ ಶ್ರೀಗಳ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಗೆ ಉಡುಪಿಯಲ್ಲಿ ಅದ್ದೂರಿ ಸ್ವಾಗತ

Update: 2021-11-11 15:09 GMT

ಉಡುಪಿ, ನ.11: ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಸ್ವಾಮೀಜಿಗೆ ನೀಡಲಾದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಅದನ್ನು ಸ್ವೀಕರಿಸಿದ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಗುರುವಾರ ಉಡುಪಿಯಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.

ಉಡುಪಿ ಸಂಸ್ಕೃತ ಕಾಲೇಜಿಗೆ ಆಗಮಿಸಿದ ಪೇಜಾವರ ಸ್ವಾಮೀಜಿಯನ್ನು ಸ್ವಾಗತಿಸಿ, ಬಳಿಕ ಅಲಂಕೃತ ವಾಹನದಲ್ಲಿ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಭಾವ ಚಿತ್ರ ಹಾಗೂ ಪದ್ಮವಿಭೂಷಣ ಪ್ರಶಸ್ತಿಯೊಂದಿಗೆ ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ತರಲಾಯಿತು.

ಕನಕದಾಸ ರಸ್ತೆಯಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಬಿರುದಾವಳಿ ಚಂಡೆ ವಾದ್ಯಮೇಳಗಳ ಸಹಿತ ಗಣ್ಯರು ಹಾಜರಿದ್ದರು. ನಂತರ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ಕೃಷ್ಣ ದೇವರಿಗೆ ಪ್ರಶಸ್ತಿ ಅರ್ಪಿಸಿ, ಅಷ್ಟ ಮಠಾಧೀಶರಿಗೆ ಪ್ರದರ್ಶಿಸಿ ಬಳಿಕ ರಥಬೀದಿಯಲ್ಲಿ ಪೇಜಾವರ ಮಠಕ್ಕೆ ತರಲಾಯಿತು. ಅಲ್ಲಿ ಪ್ರಶಸ್ತಿಯನ್ನು ಗುರುಗಳ ಪೀಠದಲ್ಲಿಟ್ಟು ಅರ್ಪಿಸಲಾಯಿತು.

ಬಳಿಕ ಮಠದ ಎದುರು ನಡೆದ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಗುರುಗಳಿಗೆ ದೊರೆತ ಈ ಪ್ರಶಸ್ತಿಯಿಂದ ನಾಡಿನ ಎಲ್ಲರು ಸಂಭ್ರಮ ಪಡುವಂತಾಗಿದೆ. ಪ್ರಶಸ್ತಿ ದೊರೆತ ಸಂಭ್ರಮ ಒಂದು ಕಡೆ ಇದ್ದರೆ, ಇನ್ನೊಂದೆಡೆ ಅವರೆ ಪ್ರಶಸ್ತಿ ಸ್ವೀಕರಿಸಿಲ್ಲ ಎಂಬ ದುಃಖ ಕಾಡುತ್ತದೆ. ಇದನ್ನು ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡುವಾಗ ನೆನಪಿಸಿಕೊಂಡರು ಎಂದು ಹೇಳಿದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಹಿರಿಯ ವ್ಯಕ್ತಿತ್ವವೇ ಅವರಿಗೆ ಈ ಪ್ರಶಸ್ತಿಯನ್ನು ತಂದುಕೊಟ್ಟಿದೆ. ನಿಸ್ವಾರ್ಥರಾಗಿ ಬದುಕಿದರೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಸ್ವಾಮೀಜಿಯೇ ಸಾಕ್ಷಿ. ಈ ಪ್ರಶಸ್ತಿ ಉಡುಪಿ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಸಿಕ್ಕಿದ ಗೌರವ ಎಂದು ತಿಳಿಸಿದರು.

ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಸೋದೆ ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ವಿದ್ಯಾ ರಾಮೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಸ್ವಾಗತಿಸಿದರು. ವಾಸುದೇವ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ರತ್ನ ಕುಮಾರ್ ವಂದಿಸಿದರು.

ಮಾಜಿ ಸಚಿವ ಪ್ರಮೋದ್‌ರಿಂದ ಮೋದಿ ಗುಣಗಾನ
ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಈ ಹಿಂದೆ ಪದ್ಮ ಪ್ರಶಸ್ತಿಗಳನ್ನು ಅರ್ಜಿ ಹಾಕಿ ಪಡೆದುಕೊಳ್ಳಬೇಕಾಗಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅದನ್ನು ಬದಲಾಯಿಸಿ ಅರ್ಹರಿಗೆ ನೀಡುತ್ತಿದ್ದಾರೆ. ಗುಣಕ್ಕೆ ಮತ್ಸರ ಇಲ್ಲ. ಒಳ್ಳೆಯ ಕೆಲಸ ಯಾರು ಮಾಡಿದರೂ ನಾವು ಗುಣಗಾನ ಮಾಡಬೇಕು. ನಾನು ಬೇರೆ ಪಕ್ಷದಲ್ಲಿದ್ದರೂ ಮೋದಿಯನ್ನು ಈ ವಿಚಾರದಲ್ಲಿ ಹೊಗಳುತ್ತೇನೆ ಎಂದು ತಿಳಿಸಿದರು.

ಜಿಲ್ಲಾಡಳಿತದಿಂದ ಸ್ವಾಮೀಜಿಗೆ ಗೌರವ

ಉಡುಪಿ ಸಂಸ್ಕೃತ ಕಾಲೇಜಿಗೆ ಆಗಮಿಸಿದ ಸ್ವಾಮೀಜಿಯನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ಬರಮಾಡಿಕೊಂಡರು. ಬಳಿಕ ಸ್ವಾಮೀಜಿಯನ್ನು ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News