ಮೇಲ್ಜಾತಿಯ ಯುವತಿಯೊಂದಿಗಿನ ಪ್ರೀತಿಯ ಕಾರಣಕ್ಕೆ ದಲಿತ ಯುವಕನ ಹತ್ಯೆ: ಕುಟುಂಬ ಆರೋಪ

Update: 2021-11-11 16:23 GMT

ಚೆನ್ನೈ, ನ. 11: ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ 27 ವರ್ಷದ ದಲಿತ ಯುವಕನ ಮೃತದೇಹ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ನಲ್ಲಿ ಮಂಗಳವಾರ ಪತ್ತೆಯಾಗಿದೆ.

ಆದರೆ, ಮೇಲ್ಜಾತಿಯ ವೆಲ್ಲಾಲರ್ ಸಮುದಾಯಕ್ಕೆ ಸೇರಿದ ಯುವತಿಯೊಂದಿಗಿನ ಪ್ರೇಮ ಸಂಬಂಧದ ಕಾರಣಕ್ಕೆ ಆತನನ್ನು ಹತ್ಯೆಗೈಯಲಾಗಿದೆ ಎಂದು ಯುವಕನ ಕುಟುಂಬ ಆರೋಪಿಸಿದೆ.
 
ಕೊಲೆ ಪ್ರಕರಣ ದಾಖಲಿಸುವ ವರೆಗೆ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಯುವಕನ ಕುಟುಂಬ ಹೇಳಿದೆ. ಅಲ್ಲದೆ, ಜಾತಿ ಆಧಾರಿತ ದೌರ್ಜನ್ಯದ ಕುರಿತು ತನಿಖೆ ನಡೆಸಬೇಕು ಎಂದು ಕುಟುಂಬ ಆಗ್ರಹಿಸಿದೆ. ಯುವಕನ ಸಾವಿನ ಕುರಿತಂತೆ ಪೊಲೀಸರು ಇನ್ನಷ್ಟೇ ಎಫ್ಐಆರ್ ದಾಖಲಿಸಬೇಕಾಗಿದೆ.

ಮೃತಪಟ್ಟ ಯುವಕ ಸುರೇಶ್ ಕುಮಾರ್ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ಸಮೀಪದ ಥೊವಲ್ಲಾಯಿ ಪ್ರದೇಶದ ನಿವಾಸಿ. ಈತ ಸಾಂಬವರ್ ಜಾತಿಗೆ ಸೇರಿದ್ದಾನೆ. ಈತನಿಗೆ ಕಾಲೇಜು ದಿನಗಳಿಂದಲೇ ಕತ್ತುಪುತ್ತೂರಿನ ಯುವತಿಯೊಂದಿಗೆ ಪ್ರೇಮ ಇತ್ತು. ಅವರು ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಸುರೇಶ್ ಕುಮಾರ್ನ ಜಾತಿಯ ಕಾರಣಕ್ಕೆ ಯುವತಿಯ ಹೆತ್ತವರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಸುರೇಶ್ ನ ಹಿರಿಯ ಸಹೋದರ ಸುಮನ್ ಪುದುಪಾಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿಲ್ಲಿ ಯುವತಿಯೊಂದಿಗಿನ ಸುರೇಶ್ ನ ಪ್ರೇಮ ಸಂಬಂಧದ ಕುರಿತು ಕುಟುಂಬಕ್ಕೆ ಅರಿವಿತ್ತು ಎಂದು ಹೇಳಲಾಗಿದೆ.
  
ಸೆಪ್ಟಂಬರ್ ನಲ್ಲಿ ತನ್ನನ್ನು ಭೇಟಿಯಾಗುವಂತೆ ಯುವತಿ ಸುರೇಶನಿಗೆ ತಿಳಿಸಿದ್ದಳು. ಭೇಟಿಯಾದ ಸುರೇಶನಲ್ಲಿ ಯುವತಿ ವಿವಾಹದ ಕುರಿತ ತನ್ನ ಕುಟುಂಬದಲ್ಲಿ ಮಾತನಾಡಲು ನಿಮ್ಮ ಕುಟುಂಬವನ್ನು ತಮ್ಮ ಮನೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದಳು. ತನ್ನ ಕುಟುಂಬ ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹ ನಡೆಸಲು ವರನ ಅನ್ವೇಷಣೆಯಲ್ಲಿ ತೊಡಗಿದೆ ಎಂದು ಯುವತಿ ಸುಮನ್ಗೆ ತಿಳಿಸಿದ್ದಳು. 

ಸುರೇಶನ ಜಾತಿಯ ಕಾರಣಕ್ಕೆ ತಾವು ವಿವಾಹವಾಗಲು ಮನೆಯವರು ಒಪ್ಪಿಕೊಳ್ಳುತ್ತಿಲ್ಲ ಎಂದು ಕೂಡ ಯುವತಿ ಸುಮನ್ ಗೆ ಮಾಹಿತಿ ನೀಡಿದ್ದಳು. ತನ್ನ ಕುಟುಂಬವನ್ನು ಭೇಟಿಯಾಗುವಂತೆ ಸುಮನ್ ಹಾಗೂ ಕುಟುಂಬದವರಲ್ಲಿ ಕೂಡ ಯುವತಿ ಹೇಳಿದ್ದಳು. ಒಂದು ವೇಳೆ ಅವರು ಒಪ್ಪದೇ ಇದ್ದರೆ, ತಾನು ಸುಮನ್ ಕುಟುಂಬದ ಜೊತೆ ಜೀವಿಸುವುದಾಗಿ ಆಕೆ ತಿಳಿಸಿದ್ದಳು ಎಂದು ಸುಮನ್ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.
ಯುವತಿಯ ಮನವಿಗೆ ಸುಮನ್, ತನ್ನ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಬಳಿಕ ಕರೆದುಕೊಂಡು ಹೋಗುವುದಾಗಿ ಯುವತಿಗೆ ತಿಳಿಸಿದ್ದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News