ಕ್ಯಾನ್ಸರ್ ರೋಗಿಗಳಿಗೆ ಸರಕಾರದಿಂದ ಉಚಿತ ಚಿಕಿತ್ಸೆಗಾಗಿ ಸಿಎಂಗೆ ಪತ್ರ
ಉಡುಪಿ, ನ.12: ಇತ್ತೀಚೆಗಿನ ಕೆಲವು ತಿಂಗಳಿಂದ ಕ್ಯಾನ್ಸರ್ ಕಾಯಿಲೆ ರಾಷ್ಟ್ರ ಮತ್ತು ರಾಜ್ಯವ್ಯಾಪಿ ಜನರನ್ನು ಬಾಧಿಸುತ್ತಿದ್ದು, ರಾಜ್ಯದ ಜನರ ಹಿತದೃಷ್ಟಿಯಿಂದ, ರಾಜ್ಯ ಸರಕಾರವು ಶೀಘ್ರದಲ್ಲಿ ತಜ್ಞರ ಸಮಿತಿಗಳನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸಿ ಅಥವಾ ಈಗಾಗಲೇ ಸಮಿತಿ ಇದ್ದಲ್ಲಿ ಅದನ್ನು ಸಕ್ರೀಯ ಸದಸ್ಯರ ಸಮಿತಿಯಾಗಿ ಪುನರ್ ರಚಿಸಬೇಕು ಎಂದು ಉಡುಪಿ ನಗರಸಭೆ ಮಾಜಿ ಸದಸ್ಯ ಜನಾರ್ದನ ಭಂಡಾರ್ಕರ್ ಮುಖ್ಯಮಂತ್ರಿಗೆ ಇಮೇಲ್ ಮೂಲಕ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯಗಳಿರುವ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಅನುಸಾರ ಈ ರೋಗ ಲಕ್ಷಣ ಇರುವವರಿಗೆ ಶೀಘ್ರ ತಪಾಸಣೆ ಹಾಗೂ ಆರ್ಥಿಕ ವಾಗಿ ಹಿಂದುಳಿದವರಿಗೆ ಉಚಿತ ಚಿಕಿತ್ಸೆಯನ್ನು ಸರಕಾರ ನೀಡಬೇಕು. ಕ್ಯಾನ್ಸರ್ ಕಾಯಿಲೆಯ ಜೀವರಕ್ಷಕ ಔಷಧಿಗಳು ತೀರಾ ದುಬಾರಿಯಾಗಿದ್ದು ಜನರ ಕೈಗೆಟಕುತ್ತಿಲ್ಲ. ಕೇಂದ್ರ ಸರಕಾರ ಇತ್ತೀಚಿನವರೆಗೆ ಶೇ.12 ಜಿಎಸ್ಟಿಯನ್ನು ಈ ಔಷಧಿಗಳ ಮೇಲೆ ವಿಧಿಸುತ್ತಿತ್ತು. ಕಳೆದ ತಿಂಗಳ ಅಂತ್ಯದಲ್ಲಿ ಇದನ್ನು ಶೇ.5ಕ್ಕೆ ಇಳಿಸಿದೆ. ರಾಜ್ಯವ್ಯಾಪಿ ಈ ಕಾಯಿಲೆ ಪಸರಿಸಿರುವ ಸಾಧ್ಯತೆ ಇರುವುದರಿಂದ ಜೀವರಕ್ಷಕ ಔಷಧಿಗಳ ಮೇಲೆ ಕೇಂದ್ರ ಸರಕಾರ ವಿಧಿಸಿರುವ ಶೇ.5 ಜಿಎಸ್‌ಟಿ ಯನ್ನು ರಾಜ್ಯದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಸಂಪೂರ್ಣ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಡಿಮೆ ವರಮಾನದ ಉದ್ಯೋಗಿಗಳಿಗಿರುವ ಇಎಸ್‌ಐ ಸೌಲಭ್ಯ, ವಿಮಾ ನೊಂದಾಯಿತರಿಗೆ ಸಿಗುವ ಸೌಲಭ್ಯದಲ್ಲಿರುವ ಕಠಿಣ ನಿಯಮಾವಳಿಗಳನ್ನು ಸಡಿಲಗೊಳಿಸಿ ಚಿಕಿತ್ಸೆಗೆ ಬೇಕಾದ ಆರ್ಥಿಕ ಸಹಕಾರ ಸಂಪೂರ್ಣವಾಗಿ ಸಿಗುವಂತೆ ಮಾಡಬೇಕಾದ ಅಗತ್ಯತೆಯಿದೆ. ನಿಯಮಾವಳಿಗಳ ಬಗ್ಗೆ ಇಎಸ್‌ಐ ಇಲಾಖೆಗೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ಆಸ್ಪತ್ರೆಯ ಬಿಲ್‌ಗಳನ್ನು ಸಲ್ಲಿಸುವ ಬಗ್ಗೆ ಎಲ್ಲಾ ಇಎಸ್‌ಐ ಕೇಂದ್ರಗಳಲ್ಲಿ ಹೆಲ್ಪ್‌ಡೆಸ್ಕ್ ಅಗತ್ಯತೆಯಿದ್ದು, ಸಿಬ್ಬಂದಿಗಳನ್ನು ನಿಯೋಜಿಸಿ ಸಮರ್ಪಕ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.