'ಜೈಶ್ರೀರಾಂ' ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವರ್ತಕರಿಬ್ಬರ ಮೇಲೆ ರಾಂಚಿಯಲ್ಲಿ ಹಲ್ಲೆ

Update: 2021-11-12 14:21 GMT
ಸಾಂದರ್ಭಿಕ ಚಿತ್ರ

ರಾಂಚಿ: ಜಮ್ಮು ಕಾಶ್ಮೀರದ ಇಬ್ಬರು ವರ್ತಕರಿಗೆ ಗುರುವಾರ ರಾಂಚಿಯಲ್ಲಿ ವ್ಯಕ್ತಿಯೊಬ್ಬ ಥಳಿಸಿ ಅವರಿಂದ ಬಲವಂತವಾಗಿ ಜೈ ಶ್ರೀ ರಾಮ್ ಮತ್ತು ಪಾಕಿಸ್ತಾನ್ ಮುರ್ದಾಬಾದ್ ಘೋಷಣೆಗಳನ್ನು ಹೇಳಿಸಲು ಯತ್ನಿಸಿದ ಘಟನೆ ವರದಿಯಾಗಿದೆ.

ಸಂತ್ರಸ್ತ ವರ್ತಕರಾದ ಬಿಲಾಲ್ ವಾನಿ ಮತ್ತು ಸಬೀರ್ ಬಟ್ಟ್ ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿ ರಾಜ್ ಕಿಶೋರ್ ಎಂಬಾತನನ್ನು ಬಂಧಿಸಲಾಗಿದೆ. ವರ್ತಕರಿಬ್ಬರೂ ಗ್ರಾಹಕರೊಬ್ಬರೊಂದಿಗೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿ, ನೀವು ರಾಂಚಿಯಲ್ಲಿ ವಾಸಿಸಬೇಕಿದ್ದರೆ ಜೈ ಶ್ರೀ ರಾಮ್ ಮತ್ತು ಪಾಕಿಸ್ತಾನ್ ಮುರ್ದಾಬಾದ್ ಹೇಳಬೇಕು ಎಂದು ಬಲವಂತಪಡಿಸಿದ್ದರೂ ವರ್ತಕರು ನಿರಾಕರಿಸಿದ್ದಾರೆ.

ಆಗ ಆರೋಪಿ ಅವರ ಮೇಲೆ ಹಲ್ಲೆ ನಡೆಸಿ ಅವರಿಗೆ ಗುಂಡಿಕ್ಕು ಎಂದು ತನ್ನ ಸೋದರನಿಗೆ ಹೇಳಿದ್ದಾನೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಕುಟುಂಬಸ್ಥರೂ ಆತನನ್ನು ತಡೆಯುವ ಬದಲು ಆತನಿಗೆ ಉತ್ತೇಜನ ನೀಡಿದ್ದಾರೆ ಎಂದು ದೂರಲಾಗಿದೆ.

ಬಿಲಾಲ್ ವಾನಿ ಕಳೆದ 20 ವರ್ಷಗಳಿಂದ ರಾಂಚಿಗೆ ಭೇಟಿ ನೀಡಿ ಉಣ್ಣೆಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆರೋಪಿ ಡ್ರಗ್ಸ್ ವ್ಯಸನಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಕೂಡ ಬಿಲಾಲ್ ವಾನಿ ಮತ್ತು ಕೆಲ ಇತರ ಕಾಶ್ಮೀರಿ ವರ್ತಕರ ಮೇಲೆ ಇದೇ ರೀತಿ ಹಲ್ಲೆಗೈದು ಅವರನ್ನು ದೇಶ ವಿರೋಧಿಗಳು ಎಂದು ಜರಿದು ರಾಂಚಿ ಬಿಟ್ಟು ತೆರಳುವಂತೆ ಬಲವಂತಪಡಿಸಿದ ಘಟನೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News