ಉಡುಪಿ: ನ.21ರಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಚುನಾವಣೆ ನವೆಂಬರ್ 21ರಂದು ನಡೆಯಲಿದ್ದು, ಇದರಲ್ಲಿ ಜಿಲ್ಲಾ ಅಧ್ಯಕ್ಷರು ಹಾಗೂ ಕೇಂದ್ರ ಅಧ್ಯಕ್ಷರ ಚುನಾವಣೆಯನ್ನು ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಇಂದ್ರಾಳಿ ಉಡುಪಿ ತಾಲೂಕು, ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು ತಾಲೂಕು, ನೀಲಾವರ ಸುರೇಂದ್ರ ಅಡಿಗ ಮಣೂರು ಗ್ರಾಮ ಉಡುಪಿ ತಾಲೂಕು ಈ ಮೂವರು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ನವೆಂಬರ್ 21ರಂದು ಒಟ್ಟು 8 ಮತಗಟ್ಟೆ ಕೇಂದ್ರಗಳಲ್ಲಿ ಬೆಳಗ್ಗೆ 8:00 ಗಂಟೆಯಿಂದ ಸಂಜೆ 4:00ರವರೆಗೆ ಚುನಾವಣೆ ನಡೆಯಲಿದ್ದು, 1987 ಮಂದಿ ಮತದಾರರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವವರು ಮಾತ್ರ ಈ ಚುನಾವಣೆಯ ಮತದಾರರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಡೆದ ಅಭ್ಯರ್ಥಿಗಳ ಗುರುತು ಚೀಟಿ ಅಥವಾ ಭಾರತದ ಚುನಾವಣಾ ಆಯೋಗ ನಿಗದಿ ಪಡಿಸಿರುವ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.
ಮತದಾನ ಮುಗಿದ ಕೂಡಲೇ ಆಯಾ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳಿಂದ ಮತ ಎಣಿಕೆ ವಿವರವನ್ನು ಅಧಿಕೃತ ನಮೂನೆಯಲ್ಲಿ ಪಡೆದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು. ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ ಎಣಿಕೆ ವಿವರಗಳನ್ನು ಬೆಂಗಳೂರಿನ ಕೇಂದ್ರ ಚುನಾವಣಾ ಕಚೇರಿಗೆ ಫಲಿತಾಂಶ ಘೋಷಣೆ ಮಾಡಲು ಕಳುಹಿಸಲಾಗುವುದು.
ಈ ಕುರಿತು ಹೆಚ್ಚಿನ ವಿವರಗಳಿಗೆ ಆಯಾ ತಾಲೂಕು ತಹಶೀಲ್ದಾರ್ ಹಾಗೂ ಉಡುಪಿ ತಾಲೂಕು ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಉಡುಪಿ ತಾಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾಧಿಕಾರಿ ಪ್ರದೀಪ್ ಕುರುಡೇರ್ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.