ವಿಧಾನ ಪರಿಷತ್ ಚುನಾವಣೆ: ದ.ಕ. ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆಗೆ ಅಧಿಕಾರಿಗಳ ನೇಮಕ

Update: 2021-11-12 14:36 GMT

ಮಂಗಳೂರು, ನ.12: ದ.ಕ. ವಿಧಾನ ಪರಿಷತ್ ಚುನಾವಣಾ ಕ್ಷೇತ್ರಕ್ಕೆ ದ್ವೈವಾರ್ಷಿಕ ಚುನಾವಣೆ ನಡೆಸಲು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ದ.ಕ. ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ ಹಾಗೂ ಕಡಬ ತಾಲೂಕು ಪಂಚಾಯತ್ ವ್ಯಾಪ್ತಿಗಳಿಗೆ ಆಯಾಯ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮನಪಾ ಆಯುಕ್ತರು, ಉಳ್ಳಾಲ ಹಾಗೂ ಪುತ್ತೂರು ನಗರಸಭೆಗಳ ವ್ಯಾಪ್ತಿಗಳಿಗೆ ಆಯಾಯ ನಗರಸಭೆಯ ಪೌರಾಯುಕ್ತರು, ಮೂಡುಬಿದಿರೆ ಹಾಗೂ ಬಂಟ್ವಾಳಗಳ ಪುರಸಭೆ ವ್ಯಾಪ್ತಿಗೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಮುಲ್ಕಿ, ಬೆಳ್ತಂಗಡಿ ಹಾಗೂ ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಆಯಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದ್ದಾರೆ.

ಈ ಅಧಿಕಾರಿಗಳು ಚುನಾವಣಾ ಆಯೋಗವು ಜಾರಿಗೊಳಿಸಿರುವ ಚುನಾವಣಾ ಮಾದರಿ ನೀತಿ ಸಂಹಿತೆಗಳು ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಬೇಕು. ಯಾವುದಾದರೂ ನೀತಿ ಸಂಹಿತೆಗಳು ಉಲ್ಲಂಘನೆಯಾದಲ್ಲಿ ಕೂಡಲೇ ವರದಿ ಸಲ್ಲಿಸುವಂತೆ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News