×
Ad

ಬೆಳ್ತಂಗಡಿ: ಮನೆಗೆ ನುಗ್ಗಿ ಕಳವು; ಆರೋಪಿಗಳ ಬಂಧನ

Update: 2021-11-12 20:44 IST

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ದೇರಾಜೆ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ 40ಪವನ್ ಚಿನ್ನಾಭರಣ ಹಾಗೂ ನಗದು ಕಳ್ಳತನ ನಡೆಸಿದ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ನಾವೂರು ಗ್ರಾಮದ ನಿವಾಸಿ ಮಹಮ್ಮದ್ ಸಾಲಿ(26) ಲಾಯಿಲ ಕುಂಟಿನಿ ನಿವಾಸಿ ಯಾಹ್ಯಾ (32)ನಾವೂರು ಕಿರ್ನಡ್ಕ ನಿವಾಸಿ ಬಿ.ಹೆಚ್. ನೌಫಾಲ್(27) ಎಂಬವರಾಗಿದ್ದಾರೆ. ಇವರಿಂದ ಕಳವುಗೈದ ಚಿನ್ನಾಭರಣಗಳು ಹಾಗೂ ಅದಕ್ಕೆ ಉಪಯೋಗಿಸಿದ ವಾಹನಗಳು ಹಾಗೂ ಬೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇಂದಬೆಟ್ಟು ಗ್ರಾಮದ ದೇರಾಜೆ ನಜವಾಸಿ ಮಹಮ್ಮದ್ ಎಂಬವರ ಮನೆಯಿಂದ ಅ.31ರಂದು ಮನೆಗೆ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು12ಲಕ್ಷಕ್ಕೂ ಅಧಿಕ ಮೌಲ್ಯದ 40 ಪವನ್ ಚಿನ್ನಾಭರಣ ಹಾಗೂ ರೂ. 5200 ನಗದನ್ನು ಅಪಹರಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಪ್ರದೇಶದಲ್ಲಿ ಆ ದಿನ ಸಂಚರಿಸಿದ ವಾಹನಗಳ ಮಾಹಿತಿಗಳನ್ನು ಕಲೆಹಾಕಿ ಹುಡುಕಾಟ ನಡೆಸಿದಾಗ ಪ್ರಕರಣದ ಒರ್ವ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ಅದರ ಬೆನ್ನು ಹಿಡಿದು ನಡೆಸಿದ ತನಿಖೆಯಲ್ಲಿ ಕಳವಾದ ಕೆಲ ಚಿನ್ನಾಭರಣಗಳು ಪತ್ತೆಯಾಗಿದೆ. ತನಿಖೆ ಮುಂದುವರಿಸಿದಾಗ ಎಲ್ಲ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಆಲ್ಟೋ ಕಾರು, ಒಂದು ಬೈಕ್, ನಾಲ್ಕು ಮೊಬೈಲ್ ಗಳು, ಕಳವಾದ 320 ಗ್ರಾಂ ಚಿನ್ನಾಭರಣಗಳು ಹಾಗೂ 1230 ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಂಟ್ವಾಳ ಎ.ಎಸ್.ಪಿ ಶಿವಾಂಶು ರಜಪೂತ್ ಬೆಳ್ತಂಗಡಿ ಠಾಣೆಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ವೃತ್ತನಿರೀಕ್ಷಕ ಶಿವಕುಮಾರ್  ಅವರ ನೇತೃತ್ವದಲ್ಲಿ ಪಿ.ಎಸ್.ಐ ನಂದಕುಮಾರ್, ಹಾಗ ತಂಡದವರು ಪ್ರಕರಣದ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಿದ್ದಾರೆ.

ಅತ್ಯಂತ ತ್ವರಿತವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News