ಕಾಲಿಯಾ ರಫೀಕ್ ಕೊಲೆ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಕೇರಳ ಕೋರ್ಟ್‌ಗೆ ಮನವಿ: ಮಂಗಳೂರು ಕಮಿಷನರ್
ಮಂಗಳೂರು, ನ.12: ರೌಡಿಶೀಟರ್ ಕಾಲಿಯಾ ರಫೀಕ್‌ನನ್ನು ಕೊಲೆಗೈದ ಆರೋಪಿ ಯೂಸುಫ್ ಝಿಯಾ ಅಲಿಯಾಸ್ ಝಿಯಾನನ್ನು ಕೇರಳ ಎಟಿಎಸ್ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್) ಮುಂಬೈಯಲ್ಲಿ ಗುರುವಾರ ರಾತ್ರಿ ಬಂಧಿಸಿದ್ದು, ಈತನನ್ನು ಮಂಗಳೂರು ನಗರ ಪೊಲೀಸರು ಕಸ್ಟಡಿಗೆ ಕೇಳಲಿದ್ದಾರೆ.
ಮಾಧ್ಯಮ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಕಾಲಿಯಾ ರಫೀಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಝಿಯಾನನ್ನು ಕೇರಳ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಝಿಯಾ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಲುಕ್‌ಔಟ್ ನೋಟಿಸು ಹೊರಡಿಸಲಾಗಿತ್ತು. ಖಾಲಿಯಾ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗೆ ಝಿಯಾನನ್ನು ತಮ್ಮ ವಶಕ್ಕೆ ನೀಡುವಂತೆ ಶೀಘ್ರವೇ ಕೇರಳ ಕೋರ್ಟ್‌ಗೆ ಮನವಿ ಮಾಡಲಾಗುವುದು ಎಂದರು.
2017 ಫೆ.14 ರಂದು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾಲಿಯಾ ರಫೀಕ್‌ನನ್ನು ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ಗುಂಡಿಕ್ಕಿ ಬಳಿಕ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮುಹಮ್ಮದ್ ನಜೀಬ್ ಯಾನೆ ಕಲ್ಲಟ್ರ ನಜೀಬ್, ನೂರ್ ಅಲಿ, ರಶೀದ್ ಟಿ.ಎಸ್., ಹುಸೈನಬ್ಬ ಯಾನೆ ಹುಸೈನ್ ಹಾಗೂ ಮುತಾಸಿಂ ಯಾನೆ ತಸ್ಲಿಂ ಎಂಬವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಝಿಯಾ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ.