ವಿಶ್ವದ ಅತ್ಯಂತ ಮಲಿನ ನಗರಗಳಲ್ಲಿ ಭಾರತದ ಪಾಲು ಎಷ್ಟು ಗೊತ್ತೇ?
ಹೊಸದಿಲ್ಲಿ, ನ.13: ಸುತ್ತಮುತ್ತಲ ರಾಜ್ಯಗಳಲ್ಲಿ ಹೊಲಗಳ ಬೆಂಕಿಯಿಂದ ಉತ್ಪತ್ತಿಯಾದ ಹೊಗೆ ಮತ್ತು ವಾಹನಗಳು ಉಗುಳುವ ಹೊಗೆಯ ಅಪಾಯಕಾರಿ ಸಮ್ಮಿಲನದಿಂದ ದಿಲ್ಲಿಯ ವಾಯುಮಾಲಿನ್ಯ ಮಟ್ಟ ಏರುಗತಿಯಲ್ಲಿದ್ದು, ಆರೋಗ್ಯ ತುರ್ತು ಸ್ಥಿತಿಯ ಆತಂಕ ಸೃಷ್ಟಿಯಾಗಿದೆ. ಈ ನಡುವೆ ವಿಶ್ವದ ಅತ್ಯಂತ ಹತ್ತು ಮಲಿನ ನಗರಗಳ ಪೈಕಿ ಭಾರತದ ಮೂರು ನಗರಗಳು ಸೇರಿವೆ ಎಂದು ಸ್ವಿಡ್ಜರ್‌ಲೆಂಡ್ ಮೂಲದ ಹವಾಮಾನ ಸಂಸ್ಥೆ ಮತ್ತು ಅಮೆರಿಕದ ಪರಿಸರ ಯೋಜನೆಯ ತಾಂತ್ರಿಕ ಪಾಲುದಾರ ಸಂಸ್ಥೆಯೂ ಆಗಿರುವ ಎಕ್ಯೂಐ ಬಹಿರಂಗಪಡಿಸಿದೆ.
ರಾಷ್ಟ್ರ ರಾಜಧಾನಿಯ ಸರಾಸರಿ ಎಕ್ಯೂಐ ಪ್ರಮಾಣ 556 ಆಗಿದ್ದು, ಇದು ವಿಶ್ವದಲ್ಲೇ ಅತ್ಯಧಿಕ ವಾಯುಮಾಲಿನ್ಯ ಹೊಂದಿದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಉಳಿದಂತೆ ಕೊಲ್ಕತ್ತಾ ನಾಲ್ಕನೇ ಹಾಗೂ ಮುಂಬೈ ಆರನೇ ಸ್ಥಾನದಲ್ಲಿವೆ. ವಿಶ್ವದ ಇತರ ಅತ್ಯಂತ ಮಲಿನ ನಗರಗಳಲ್ಲಿ ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಚೆಂಗ್ಡು ಸೇರಿವೆ.
ಪಾಕಿಸ್ತಾನದ ಲಾಹೋರ್, ಬಲ್ಗೇರಿಯಾದ ಸೋಫಿಯಾ, ಕ್ರೊವೇಶಿಯಾದ ಝಗ್ರೆಬ್ ಕ್ರಮವಾಗಿ 2,3 ಮತ್ತು 5ನೇ ಸ್ಥಾನದಲ್ಲಿವೆ. ಸೈಬೀರಿಯಾದ ಬೆಲ್ಗೇಡ್ 7ನೇ ಸ್ಥಾನದಲ್ಲಿದ್ದರೆ, ಚೀನಾದ ಚೆಂಗ್ಡು, ಉತ್ತರ ಮೆಕೆಡೋನಿಯಾದ ಸ್ಕೋಪ್‌ಜೆ ಮತ್ತು ಪೋಲಂಡ್‌ನ ಕ್ರಕೋವ್ ನಗರಗಳು ಅಗ್ರ 10ರ ಪಟ್ಟಿಯ ಕೊನೆಯ ಮೂರು ಸ್ಥಾನಗಳಲ್ಲಿವೆ.
ದಿಲ್ಲಿಯ ವಾಯು ಗುಣಮಟ್ಟದ ಬಗ್ಗೆ ಮುನ್ಸೂಚನೆ ನೀಡುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಪಿಕಲ್ ಮೆಟ್ರಾಲಜಿ (ಐಐಟಿಎಂ) ನಿರ್ಧಾರ ಬೆಂಬಲ ವ್ಯವಸ್ಥೆ (ಡಿಎಸ್‌ಎಸ್), ಮಾಲಿನ್ಯದ ಅಂಶಗಳನ್ನು ಗುರುತಿಸಿದ್ದು, ದಿಲ್ಲಿಯು ಝಾಜ್ಜರ್, ಗುರುಗ್ರಾಮ, ಭಾಗ್‌ಪತ್, ಗಾಝಿಯಾಬಾದ್ ಮತ್ತು ಸೋನೆಪತ್‌ನಿಂದಲೂ ಮಾಲಿನ್ಯಕಾರಕ ಕರಣಗಳನ್ನು ಸ್ವೀಕರಿಸುತ್ತಿದೆ ಎಂದು ಶುಕ್ರವಾರ ಬಹಿರಂಗಪಡಿಸಿದೆ.
ಭತ್ತದ ಹುಲ್ಲಿನ ಸುಡುವಿಕೆಯಿಂದ ಬರುವ ಹೊಗೆ ದಿಲ್ಲಿಯ ಪಿಎಂ 2.5ಗೆ ಶೇಕಡ 15ರಷ್ಟು ಕೊಡುಗೆ ನೀಡುತ್ತಿದೆ. ಸ್ಥಳೀಯ ವಾಹನಗಳ ಹೊಗೆ ಶೇಕಡ 25ರಷ್ಟು, ಮನೆಗಳಿಂದ ಬರುವ ಹೊಗೆ ಶೇಕಡ 7ರಷ್ಟು ಮಾಲಿನ್ಯಕಾರಕ ಕಣಗಳನ್ನು, ದಿಲ್ಲಿಯ ಕೈಗಾರಿಕೆಗಳಿಂದ ಶೇಕಡ 9-10ರಷ್ಟು ಮಾಲಿನ್ಯಕಾರಕ ಕಣಗಳು ಹೊರಸೂಸುತ್ತಿವೆ ಎಂದು ಸ್ಪಷ್ಟಪಡಿಸಿದೆ.