×
Ad

'ಅಕ್ಷರ ಸಂತ'ನ ಮನೆಗೆ 'ವೃಕ್ಷ ದೇವಿ' ಭೇಟಿ

Update: 2021-11-13 11:18 IST

ಕೊಣಾಜೆ, ನ.13: ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ಹರೇಕಳ ಹಾಜಬ್ಬರ ಮನೆಗೆ ಅಂಕೋಲಾ ತಾಲೂಕಿನ ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ 'ವೃಕ್ಷ ದೇವಿ' ತುಳಸೀ ಗೌಡ ಶನಿವಾರ ಬೆಳಗ್ಗೆ ಭೇಟಿ ನೀಡಿದರು.

ಇಂದು ಬೆಳಗ್ಗೆ 9:30ರ ವೇಳೆಗೆ ನ್ಯೂಪಡ್ಪುವಿನಲ್ಲಿರುವ ಹಾಜಬ್ಬರ ಮನೆಗೆ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಭೇಟಿ ನೀಡಿದ ತುಳಸಿ ಗೌಡರನ್ನು ಹಾಜಬ್ಬ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು. ಈ ವೇಳೆ ಇಬ್ಬರು ಜೊತೆಯಾಗಿ ಉಪಹಾರ ಸೇವಿಸಿದರು.

ಈ ಸಂದರ್ಭ ಮಾತನಾಡಿದ ಹಾಜಬ್ಬ, ಪದ್ಮಶ್ರೀ ತುಳಸೀ ಗೌಡ ಅವರು ಈ ಬಡವನ ಮನೆಗೆ ಭೇಟಿ ನೀಡಿರುವುದು ನನ್ನ ಪುಣ್ಯ. ಮೊನ್ನೆ ದಿಲ್ಲಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದರೂ ಮಾತುಕತೆಗೆ ಸರಿಯಾದ ಅವಕಾಶ ದೊರೆತಿರಲಿಲ್ಲ. ಇದೀಗ ನನ್ನ ಮನೆಗೇ ಈ ಅಮ್ಮ‌ ಬಂದಿರುವುದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಪದ್ಮಶ್ರೀ ತುಳಸೀ ಗೌಡ ಮಾತನಾಡಿ, ಹಾಜಬ್ಬರನ್ನು ಮೊನ್ನೆ ಸರಿಯಾಗಿ ಭೇಟಿಯಾಗಲು ಸಾಧ್ಯವಾಗದೆ ಇದೀಗ ಅವರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಹಾಜಬ್ಬರು ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡಬೇಕು. ನಿಮ್ಮೆಲ್ಲರ ಸಹಕಾರ ಇರಲಿ. ಹಾಜಬ್ಬರ ಶಾಲೆಯ ಅಭಿವೃದ್ಧಿಗೆ ನನ್ನಲ್ಲಿ ಆದಂತಹ ಸಹಕಾರವನ್ನು ನೀಡುತ್ತೇನೆ. ನೀವೆಲ್ಲರೂ ಅವರ ಕನಸಿಗೆ ಸಹಕರಿಸಿ ಎಂದು ಹೇಳಿದರು.

ಹಾಜಬ್ಬರ ಶಾಲೆಗೂ ಭೇಟಿ: ಪದ್ಮಶ್ರೀ ತುಳಸೀ ಗೌಡ ಅವರು ಬಳಿಕ ಹಾಜಬ್ಬರ ಕನಸಿನ ಶಾಲೆಗೂ ಭೇಟಿ ನೀಡಿದರು. ಅವರನ್ನು ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಇದೇವೇಳೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News