ಉಡುಪಿ ಜಿಲ್ಲೆಯಲ್ಲಿ 16.16 ಹೆಕ್ಟೇರ್ ಭತ್ತದ ಕೃಷಿಗೆ ಹಾನಿ

Update: 2021-11-13 10:01 GMT
ಗಂಗೊಳ್ಳಿಯ ಗದ್ದೆಯೊಂದರಲ್ಲಿ ಕಟಾವು ಮಾಡಿರುವ ಭತ್ತದ ಕೃಷಿ ಅಕಾಲಿಕ ಮಳೆಯಿಂದ ನೀರು ಪಾಲಾಗಿರುವುದು. (ಫೈಲ್ ಫೋಟೋ)

ಉಡುಪಿ, ನ.13: ಹವಾಮಾನ ವೈಪರೀತ್ಯದಿಂದಾಗಿ ಕಳೆದ ಒಂದೂವರೆ ತಿಂಗಳುಗಳಿಂದ ಜಿಲ್ಲಾದ್ಯಂತ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದಾರೆ. ಕಟಾವಿಗೆ ಅಣಿಯಾಗಿದ್ದ ಹಲವು ಹೆಕ್ಟೇರ್ ಭತ್ತದ ಕೃಷಿ ಹಾನಿಯಾಗಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಈಗಾಗಲೇ ಕೂಲಿ ಕಾರ್ಮಿಕರ ಅಭಾವ, ಕಾಡುಪ್ರಾಣಿಗಳ ಹಾವಳಿ, ಕಟಾವು ಯಂತ್ರಗಳ ದುಬಾರಿ ಬಾಡಿಗೆ ಸಮಸ್ಯೆಗಳ ಮಧ್ಯೆ ತತ್ತರಿಸಿರುವ ರೈತರು, ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ನಷ್ಟಕ್ಕೆ ಒಳಗಾಗಿದ್ದಾರೆ. ಶ್ರಮವಹಿಸಿ ಬಿತ್ತಿ ನಾಟಿ ಮಾಡಿರುವ ಭತ್ತದ ಕೃಷಿ ಕಟಾವು ಮಾಡದ ಸ್ಥಿತಿಯಲ್ಲಿದೆ. ಕೆಲವು ರೈತರು ಕಟಾವು ಮಾಡಿ ಗದ್ದೆಯಲ್ಲೇ ಉಳಿಸಿಕೊಂಡಿರುವ ಭತ್ತದ ಕೃಷಿಗೂ ಮಳೆಯಿಂದಾಗಿ ಹಾನಿಯಾಗಿದೆ.

ಜಿಲ್ಲೆಯಲ್ಲಿ ಈ ಬಾರಿ 35,726 ಹೆಕ್ಟೇರ್‌ನಷ್ಟು ಭತ್ತದ ಕೃಷಿ ಮಾಡಲಾಗಿದ್ದು, ಸದ್ಯ ಇದು ಭತ್ತ ಕಟಾವಿಗೆ ಯೋಗ್ಯವಾದ ಸಮಯ. ಜೂನ್, ಜುಲೈ ತಿಂಗಳಲ್ಲಿ ನಾಟಿ ಮಾಡಿರುವ ಭತ್ತದ ಕೃಷಿ ಸದ್ಯ ಕಟಾವಿಗೆ ಯೋಗ್ಯವಾಗಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇದನ್ನು ಕಟಾವು ಮಾಡಲು ಸಾಧ್ಯವಾಗದೆ ಗದ್ದೆಯಲ್ಲಿ ಬಿಟ್ಟು ಬಿಡಲಾಗಿದೆ. ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 16.16 ಹೆಕ್ಟೇರ್ ಭತ್ತದ ಕೃಷಿ ಹಾನಿಯಾಗಿದ್ದು, ಸುಮಾರು 52 ರೈತರು ನಷ್ಟ ಅನುಭವಿಸಿದ್ದಾರೆ.

ಜುಲೈ ತಿಂಗಳಲ್ಲಿ 11.18 ಹೆಕ್ಟೇರ್, ಅಕ್ಟೋಬರ್ ತಿಂಗಳಲ್ಲಿ 4.98 (12.5ಎಕರೆ) ಹೆಕ್ಟೇರ್ ಭತ್ತದ ಕೃಷಿ ಹಾನಿಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 16 ರೈತರು ನಷ್ಟ ಅನುಭವಿಸಿದ್ದು, ಇದರಲ್ಲಿ ಬ್ರಹ್ಮಾವರದಲ್ಲಿ 4, ಕಾಪುವಿನಲ್ಲಿ 6, ಹೆಬ್ರಿ 2, ಕಾರ್ಕಳದಲ್ಲಿ 2, ಕುಂದಾಪುರದಲ್ಲಿ 2 ಮಂದಿ ರೈತರು ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೃಷಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಕೆಲವು ರೈತರು ಕಟಾವು ಯಂತ್ರಗಳ ದುಬಾರಿ ಬಾಡಿಗೆ ಬಿಸಿಯನ್ನು ಕೂಡ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ 2,500-3,000ರೂ. ವಸೂಲಿ ಮಾಡಲಾಗುತ್ತಿದೆ. ಜಿಲ್ಲಾಡಳಿತ 1,800 ರೂ. ನಿಗದಿ ಮಾಡಿದ್ದರೂ ಖಾಸಗಿ ಯಂತ್ರ ಮಾಲಕರು ತಮ್ಮದೇ ಬಾಡಿಗೆ ನಿಗದಿಪಡಿಸಿ ಸುಲಿಯುತ್ತಿದ್ದಾರೆ ಎಂದು ಕೃಷಿಕರು ಆರೋಪಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ಹಾನಿಯಾದ ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗದರ್ಶನದ ಪ್ರಕಾರ ಪರಿಹಾರ ನೀಡಲಾಗುತ್ತದೆ. ಇಲಾಖೆಯಿಂದ ಸಮೀಕ್ಷೆ ಮಾಡಿ ಆಯಾ ತಹಶೀಲ್ದಾರ್‌ಗಳಿಗೆ ವರದಿ ಸಲ್ಲಿಸಲಾಗುತ್ತದೆ. ಅಲ್ಲಿ ಪರಿಹಾರ ತಂತ್ರಾಂಶದ ಮೂಲಕ ರೈತರ ಖಾತೆಗೆ ಹಣ ಪಾವತಿ ಯಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 6,800 ರೂ. ಪರಿಹಾರ ಹಣವನ್ನು ನಿಗದಿಪಡಿಸಲಾಗಿದೆ.

ಸತೀಶ್ ಬಿ., ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ ಉಡುಪಿ

3 ತಿಂಗಳಲ್ಲಿ ಮೆಸ್ಕಾಂಗೆ 3.27ಕೋ.ರೂ. ನಸ್ಟ!

ಕಳೆದ ಕೆಲವು ತಿಂಗಳುಗಳಿಂದ ಉಡುಪಿ ಜಿಲ್ಲಾದ್ಯಂತ ಸುರಿಯುತ್ತಿರುವ ಗುಡುಗು ಸಹಿತ ಭಾರೀ ಗಾಳಿಮಳೆಯಿಂದ ಉಡುಪಿ ಮೆಸ್ಕಾಂಗೆಕೋಟ್ಯಂತರ ರೂ. ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಸೆಪ್ಟಂಬರ್‌ನಿಂದ ಈವರೆಗೆ 715 ವಿದ್ಯುತ್ ಕಂಬಗಳು, 232 ಟ್ರಾನ್ಸ್‌ಫಾರ್ಮರ್‌ಗಳು, 16.7ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾನಿಯಾಗಿ ಒಟ್ಟು 3.27 ಕೋಟಿ ರೂ. ನಷ್ಟ ಉಂಟಾಗಿದೆ.

ಸೆಪ್ಟಂಬರ್‌ನಲ್ಲಿ 266 ವಿದ್ಯುತ್ ಕಂಬಗಳು, 82 ಟ್ರಾನ್ಸ್‌ಫಾರ್ಮರ್‌ಗಳು, 6.66ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾನಿಯಾಗಿ ಒಟ್ಟು 117.51 ಲಕ್ಷ ರೂ., ಅಕ್ಟೋಬರ್‌ನಲ್ಲಿ 383 ವಿದ್ಯುತ್ ಕಂಬ, 108 ಟ್ರಾನ್ಸ್‌ಫಾರ್ಮರ್, 7.16ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾನಿಯಾಗಿ ಒಟ್ಟು 156.64 ಲಕ್ಷ ರೂ. ಹಾಗೂ ನವೆಂಬರ್‌ನಲ್ಲಿ ಈವರೆಗೆ 66 ವಿದ್ಯುತ್ ಕಂಬ, 42 ಟ್ರಾನ್ಸ್ ಫಾರ್ಮರ್, 2.88 ಕಿ.ಮೀ. ಉದ್ದದ ವಿದ್ಯುತ್ ತಂತಿ ಹಾನಿಯಾಗಿ ಒಟ್ಟು53.47ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News