ರಸ್ತೆಬದಿಯಲ್ಲಿ ಕಸ: ತಕ್ಷಣ ವಿಲೇವಾರಿಗೆ ವೆಲ್ಫೇರ್ ಪಾರ್ಟಿ ಆಗ್ರಹ
ಭಟ್ಕಳ: ಭಟ್ಕಳ ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯ ರಹಮತಾಬಾದ್ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದುಕೊಂಡಿದ್ದು ಇದರಿಂದಾಗಿ ಈ ಭಾಗದ ಸಾರ್ವಜನಿಕರಿಗೆ ಅತೀವ ತೊಂದರೆಯುಂಟಾಗುತ್ತಿದೆ. ಕೂಡಲೆ ಕಸ ವಿಲೇವಾರಿ ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಾಮಿಯಾಬಾದ್ ರಸ್ತೆಯಲ್ಲಿರುವ ರಹಮತಾಬಾದ್ ಪ್ರದೇಶದಲ್ಲಿ ಕಸವನ್ನು ರಸ್ತೆಯಲ್ಲಿಯೇ ಹಾಕುತ್ತಿರುವುದರಿಂದ ಅಕ್ಕ ಪಕ್ಕದ ಮನೆಯವರಿಗೆ ತೀರಾ ತೊಂದರೆಯಾಗುತ್ತಿದೆ. ಕಸದ ರಾಶಿಯಿಂದಾಗಿ ಸೊಳ್ಳೆಗಳು ಜಾಸ್ತಿಯಾಗಿದ್ದು ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡಾ ಇದೆ. ಕಸದ ರಾಶಿ ಕೊಳೆತು ಕೆಟ್ಟ ವಾಸನೆ ಬೀರುವುದರಿಂದ ಈ ಭಾಗದಲ್ಲಿರುವ ಮನೆಗಳಲ್ಲಿ ಕುಳಿತು ಊಟ ಮಾಡುವುದಕ್ಕೂ ಸಹ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ವ್ಯವಸ್ಥಾಪಕಿ ಲತಾ ನಾಯ್ಕ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪ್ರಧಾನಕಾರ್ಯದರ್ಶಿ ಆಸಿಫ್ ಶೇಖ್, ಅಬ್ದುಲ್ ಜಬ್ಬಾರ್ ಅಸದಿ ಮುಂತಾದವರು ಉಪಸ್ಥಿತರಿದ್ದರು.