×
Ad

ಕಾಂಗ್ರೆಸ್ ಸಮಾಜವನ್ನು ಒಗ್ಗೂಡಿಸುತ್ತಿದೆ: ಯು.ಟಿ ಖಾದರ್

Update: 2021-11-13 19:16 IST

ಕಾಪು: ಸಂತೋಷ ಮತ್ತು ನೆಮ್ಮದಿಯಿಂದ ಸೌಹಾರ್ದತೆಯ ವಾತಾವರಣದಲ್ಲಿ ಬದುಕಲು ಜಾತ್ಯಾತೀತ ಪಕ್ಷವಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್  ಪಕ್ಷ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಬಿಜೆಪಿಯು ಅಲ್ಪಸಂಖ್ಯಾತರನ್ನು ಮತ್ತು ಬಹುಸಂಖ್ಯಾತರ ನಡುವೆ ನಡುವೆ ಕಂದಕವನ್ನು ಸೃಷ್ಟಿಸುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಶನಿವಾರ ಕಾಪುವಿನ ರಾಜೀವ್ ಭವನದಲ್ಲಿ ಕಾಪು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ತಂಡದ ಪದಾಧಿಕಾರಿಗಳ ಹಾಗೂ ಗ್ರಾಮೀಣ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಬಿಜೆಪಿ ಭಾವನಾತ್ಮಕ ವಿಷಯಗಳ ಜನರಲ್ಲಿ ಗೊಂದಲ ಸೃಷ್ಟಿಸಿ ಧರ್ಮಗಳ ಮಧ್ಯೆ ವಿಭಜಿಸಲು ಹೊರಟಿದೆ. ಬಿಜೆಪಿಯ ಈ ಕೃತ್ಯಕ್ಕೆ ಎಸ್‍ಡಿಪಿಐ ಸಮಾಜವನ್ನು ಒಡೆದು ಆಳುವ ನೀತಿಯಲ್ಲಿ ಸಾಥ್ ನೀಡುತ್ತಿದೆ. ಕೋಮುವಾದಿಗಳು ಅಧಿಕಾರಕ್ಕೆ ಬಂದರೆ ಏನು ಆಗಬಹುದು ಎಂಬುವುದು ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಸಾಕ್ಷಿಯಾಗಿವೆ. ಜಾತ್ಯಾತೀತ ತತ್ವಕ್ಕೆ ಅನುಗುಣವಾಗಿ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಮಹಾತ್ಮ ಗಾಂಧಿಯವರ ಕನಸಿನ ಭಾರತ ನಿರ್ಮಾಣ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು. 

ಅಖಂಡ ಭಾರತ ನಿರ್ಮಾಣದ ಬಗ್ಗೆ ಹೋರಾಟ ನಡೆಸುತಿದ್ದ ಸಂಘಟನೆಗಳು ಈಗ ಈ ಬಗ್ಗೆ ಮಾತನಾಡುತಿಲ್ಲ. ಧೈರ್ಯ ಇದ್ದರೆ ಅಖಂಡ ಭಾರತ ನಿರ್ಮಾಣ ಮಾಡಿ ಎಂದ ಯು.ಟಿ, ಖಾದರ್ ಇಂತಹ ಭಾವನಾತ್ಮಕ ವಿಚಾರದ ಬಗ್ಗೆ ಜನರಲ್ಲಿ ತುಂಬಿಸಿ ಜನರನ್ನು ವಿಭಜಿಸುವ ಕೆಲಸವನ್ನು ಮಾಡಬೇಡಿ ಎಂದ ಅವರು. ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಪರಿಹಾರ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಹೇಳಿದರು. 

ಸನ್ಮಾನ: ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ, ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ಆಸಿಫ್ ಆಪದ್ಬಾಂಧವ ಪಡುಬಿದ್ರಿ, ರೋಷನ್ ಬೆಳ್ಮಣ್‍ರವರನ್ನು  ಸನ್ಮಾನಿಸಲಾಯಿತು.

ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾದ ಶಫುದ್ದೀನ್ ಶೇಖ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ಲಾ ಎಚ್. ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.  ಇದೇ ಸಂದರ್ಭದಲ್ಲಿ ಅಬ್ದುಲ್ಲಾ ಎಚ್. ಅವರನ್ನು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ ಘೋಷಿಸಲಾಯಿತು. 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್  ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾಪು ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶರ್ಫುದ್ದೀನ್ ಶೇಕ್, ಮುಖಂಡರಾದ ರಾಜಶೇಖರ್ ಕೋಟ್ಯಾನ್, ಎಂ. ಪಿ  ಮೊಯಿದಿನಬ್ಬ, ಅಬ್ದುಲ್ ಅಜೀಜ್ ಹೆಜ್ಮಾಡಿ, ಪ್ರಭಾ ಶೆಟ್ಟಿ, ಐಡಾ ಗಿಬ್ಬ, ಸೌರಭ್ ಬಳ್ಳಾಲ್, ದಿವಾಕರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ವಿಲ್ಸನ್ ರಾಡ್ರಿಗಸ್, ಹರೀಶ್ ನಾಯಕ್, ಗೀತಾ ವಾಗ್ಳೆ, ರಮೀಜ್ ಹುಸೈನ್, ಎಚ್ ಅಬ್ದುಲ್ಲಾ, ಮೆಲ್ವಿನ್ ಡಿಸೋಜಾ, ಜೀತೇಂದ್ರ ಪುರ್ಟಾಡೋ, ಪ್ರಶಾಂತ್ ಜತ್ತನ್ನ, ರಾಜೇಶ್ ಮೆಂಡನ್, ಯು.ಸಿ.ಶೇಕಬ್ಬ ಉಚ್ಚಿಲ, ಗೋಪಾಲ ಪೂಜಾರಿ, ಸರಸು ಬಂಗೇರಾ, ಶಿವಾಜಿ ಸುವರ್ಣ,  ದಿನೇಶ್ ಫಲಿಮಾರು, ಸುಧಾಕರ ಕೆ., ಅಮೀರ್ ಕಾಪು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News