ಕಾಶ್ಮೀರ: 25 ವರ್ಷ ಹಳೆಯ ಕಸ್ಟಡಿ ಸಾವಿನ ಪ್ರಕರಣದ ಮರುತನಿಖೆಗೆ ಕೋರ್ಟ್ ಆದೇಶ

Update: 2021-11-13 14:45 GMT

ಶ್ರೀನಗರ, ನ.13: ಇಪ್ಪತ್ತೈದು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಸಂಭವಿಸಿದ್ದ ಕಸ್ಟಡಿ ಸಾವಿನ ಪ್ರಕರಣದ ಮರುತನಿಖೆಯನ್ನು ನಡೆಸುವಂತೆ ಇಲ್ಲಿಯ ನ್ಯಾಯಾಲಯವು ಜಮ್ಮು-ಕಾಶ್ಮೀರ ಪೊಲೀಸರಿಗೆ ಆದೇಶಿಸಿದೆ ಎಂದು thewire.in ವರದಿ ಮಾಡಿದೆ.

ಖನ್ಯಾರ್ ನ ಮಿಸ್ಕಿನ್ ಬಾಗ್ ನಿವಾಸಿ ಮುಹಮ್ಮದ್ ರಮಝಾನ್ ಅವರನ್ನು 1996, ಮೇ 31-ಜ.1ರ ರಾತ್ರಿ ಪೊಲೀಸರು ಕೊಂದಿದ್ದರು ಎಂದು ಅವರ ಪತ್ನಿ ಜಮೀಲಾ ಬೇಗಂ ಆರೋಪಿಸಿದ್ದರೆ, ರಮಝಾನ್ ಓರ್ವ ಉಗ್ರಗಾಮಿಯಾಗಿದ್ದ. ಮಿಸ್ಕಿನ್ ಬಾಗ್ ನ ಅಡಗುದಾಣವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ್ದ ಗುಂಡಿನ ಚಕಮಕಿಯಲ್ಲಿ ಆತ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದರು.

ರಮಝಾನ್ ಅಂತ್ಯಕ್ರಿಯೆಯ ಸಂದರ್ಭದಲ್ಲಿ ತನ್ನ ಪತಿಗೆ ನ್ಯಾಯವನ್ನು ದೊರಕಿಸುವವರೆಗೆ ತಾನು ವಿರಮಿಸುವುದಿಲ್ಲ ಎಂದು ಆಗ 35ರ ಹರೆಯದವರಾಗಿದ್ದ ಜಮೀಲಾ ಶಪಥವನ್ನು ಮಾಡಿದ್ದರು.

ನ್ಯಾಯಕ್ಕಾಗಿ ಹೋರಾಡಲು ಜಮೀಲಾ ನಿರ್ಧರಿಸಿದ್ದರು. ತನ್ನ ಹೋರಾಟದಲ್ಲಿ ಪ್ರತಿಯೊಂದೂ ಬಾಗಿಲನ್ನೂ ಬಡಿದಿದ್ದ ಅವರು, ಪ್ರಕರಣದಲ್ಲಿ ತನಿಖೆಯನ್ನು ಮತ್ತು ತನ್ನ ಪತಿಯನ್ನು ಕೊಂದವರಿಗೆ ದಂಡನೆಯನ್ನು ಕೋರಿ ಫಾರೂಕ್ ಅಬ್ದುಲ್ಲಾ, ಮುಫ್ತಿ ಮುಹಮ್ಮದ್ ಸಯೀದ್ ಮತ್ತು ಅಲಿ ಮುಹಮ್ಮದ್ ಸಾಗರ್ ಅವರಂತಹ ರಾಜಕಾರಣಿಗಳನ್ನು ಹಾಗೂ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಆದರೆ ಅದರಿಂದ ಏನೂ ಆಗಿರಲಿಲ್ಲ.

2006ರಲ್ಲಿ ಪ್ರಕರಣಕ್ಕೆ ಮರುಜೀವ ನೀಡುವಲ್ಲಿ ಜಮೀಲಾ ಯಶಸ್ವಿಯಾಗಿದ್ದರು. ಆದರೆ ಪೊಲೀಸರು ರಚಿಸಿದ್ದ ವಿಶೇಷ ತನಿಖಾ ತಂಡ (ಸಿಟ್)ವು ತನಿಖೆಯನ್ನು ನಡೆಸಿರಲಿಲ್ಲ. ಜಮೀಲಾ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲನ್ನೇರಿದ್ದರಾದರೂ, ಅದರ ಶಿಫಾರಸುಗಳನ್ನು ಜಮ್ಮು-ಕಾಶ್ಮೀರ ಸರಕಾರವು ಮೂಲೆಗುಂಪು ಮಾಡಿತ್ತು. ಆದರೆ ಜಮೀಲಾ ತನ್ನ ಪ್ರಯತ್ನವನ್ನು ಕೈಬಿಟ್ಟಿರಲಿಲ್ಲ. ಪ್ರಕರಣದ ಮರುತನಿಖೆಗಾಗಿ ಡಿವೈಎಸ್ಪಿ ಗಿಂತ ಕೆಳಗಿನ ದರ್ಜೆಯಲ್ಲದ ಅಧಿಕಾರಿಯ ನೇತೃತ್ವದಲ್ಲಿ ಸಿಟ್ ರಚಿಸುವಂತೆ ನ್ಯಾಯಾಲಯವು ಅ.28ರಂದು ಪೊಲೀಸರಿಗೆ ಆದೇಶಿಸಿದೆ.

ಎಡಿಜಿಪಿ (ಸಿಐಡಿ) ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿಯು ಬೆಟ್ಟುಮಾಡಿರುವ ಗಂಭೀರ ಸ್ಥಿತಿಯ ಬಗ್ಗೆ ಪೊಲೀಸರ ಗಮನ ಸೆಳೆದಿದ್ದರೂ ಅವರು ತಮ್ಮಿಂದ ನಿರೀಕ್ಷಿತ ಗಂಭೀರ ಹೊಣೆಗಾರಿಕೆಯಿಂದ ವಿಷಯವನ್ನು ಪರಿಶೀಲಿಸದಿರುವುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಮರಣೋತ್ತರ ಪರೀಕ್ಷೆ ವರದಿ ಮತ್ತು ಸಿಐಡಿಯ ದೃಢೀಕರಣ ವರದಿಗಳು ಪೊಲೀಸರ ಹೇಳಿಕೆಗಳಿಗೆ ವಿರುದ್ಧವಾಗಿವೆ. ರಮಝಾನ್ ಅವರ ಶರೀರದಲ್ಲಿ ಚಿತ್ರಹಿಂಸೆಯ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯು ಹೇಳಿದ್ದರೆ, ಅವರು ಯಾವುದೇ ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಸಿಐಡಿ ವರದಿಯು ಸ್ಪಷ್ಟಪಡಿಸಿದೆ ಎನ್ನುವುದನ್ನು ನ್ಯಾಯಾಲಯವು ಎತ್ತಿ ತೋರಿಸಿದೆ.

ಪ್ರಕರಣವು 2006ರಲ್ಲಿ ಮರುಜೀವ ಪಡೆಯುವುದಕ್ಕೆ ಮುನ್ನ ರೈನಾವರಿ ಪೊಲೀಸ್ ಠಾಣೆಯ ಆಗಿನ ಠಾಣಾಧಿಕಾರಿ ಮತ್ತು ತನಿಖೆಯಲ್ಲಿ ಪ್ರಮುಖವಾಗಿ ಪಾಲ್ಗೊಂಡಿದ್ದ ಇತರ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸುವಂತೆ ಮತ್ತು ಹೊಣೆಗಾರಿಕೆಗಳನ್ನು ನಿಗದಿಗೊಳಿಸುವಂತೆಯೂ ನ್ಯಾಯಾಲಯವು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದೆ.

2006ರಲ್ಲಿ ಪ್ರಕರಣವು ಮರುಜೀವ ಪಡೆದ ನಂತರ ತನ್ನ ಆದೇಶದಂತೆ ರಚಿಸಲಾಗಿದ್ದ ಸಿಟ್ ನ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ ಎಂದು ಜಮೀಲಾ ಪರ ನ್ಯಾಯವಾದಿ ತಬಸ್ಸುಮ್ ರಸೂಲ್ ಅವರು thewire.in ಗೆ ತಿಳಿಸಿದರು.

1996ಮೇ 31ರಂದು ಸಂಜೆ ರಮಝಾನ್ ಅವರ ದಿನಸಿ ಅಂಗಡಿಗೆ ನುಗ್ಗಿದ್ದ ಪೊಲೀಸರು ಅವರನ್ನು ಥಳಿಸಿ ಠಾಣೆಗೆ ಎಳೆದೊಯ್ದಿದ್ದರು. ತನ್ನ ಪತಿಯಿಂದ ಸಾಲ ಪಡೆದಿದ್ದ ಇಬ್ಬರು ಸಶಸ್ತ್ರ ಪೊಲೀಸರೂ ಅವರ ಜೊತೆಯಲ್ಲಿದ್ದರು. ಮರುದಿನ ಮಿಸ್ಕಿನ್ ಬಾಗ್ ನ ನಾಲಾವೊಂದರಲ್ಲಿ ರಮಝಾನ್ ಶವ ಪತ್ತೆಯಾಗಿತ್ತು ಎಂದು ಜಮೀಲಾ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News