ಉಡುಪಿ: 15ರೊಳಗೆ ಡಯಾಲಿಸೀಸ್ ಘಟಕದ ಸಿಬ್ಬಂದಿಗಳಿಗೆ ವೇತನಕ್ಕೆ ಗಡುವು
ಉಡುಪಿ, ನ.13: ಮುಂದಿನ ನ.15ರ ಸೋಮವಾರ ಸಂಜೆಯೊಳಗೆ ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸೀಸ್ ಘಟಕದ ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳಿಂದ ಬಾಕಿ ಇರುವ ವೇತನ ಪಾವತಿ ಹಾಗೂ ರಾಜ್ಯದ ಎಲ್ಲಾ ಡಯಾಲಿಸೀಸ್ ಘಟಕಗಳಲ್ಲಿ ಖಾಲಿಯಾಗಿರುವ ರಾಸಾಯನಿಕ ಸಾಮಾಗ್ರಿ ಹಾಗೂ ಫಿಲ್ಟರ್‌ಗಳನ್ನು ಭರ್ತಿ ಮಾಡುವಲ್ಲಿ ಸರಕಾರ ವಿಫಲವಾದರೆ, ಮಂಗಳವಾರ ಬೆಳಗ್ಗೆ 11:00ರಿಂದ ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸೀಸ್ ಘಟಕದಲ್ಲಿ ಡಯಾಲಿಸೀಸ್‌ಗೆ ಅಗತ್ಯ ಇರುವ ರಾಸಾಯನಿಕ ಸಾಮಾಗ್ರಿಗಳು ಹಾಗೂ ಫಿಲ್ಟರ್‌ಗಳು ಸಂಪೂರ್ಣವಾಗಿ ಖಾಲಿಯಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿರುತ್ತದೆ ಎಂದರು.
ಕರ್ನಾಟಕದಲ್ಲಿ ಇರುವ ಒಟ್ಟು 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆಯನ್ನು ಬಿ.ಆರ್.ಎಸ್. ಕಂಎನಿ ಹಾಗೂ ಉಳಿದ 8 ಜಿಲ್ಲೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆಯನ್ನು ಹೊರ ರಾಜ್ಯದ ಸಂಜೀವಿನಿ ಹೆಸರಿನ ಖಾಸಗಿ ಸಂಸ್ಥೆ ವಹಿಸಿಕೊಂಡಿವೆ.
2007ರ ಎಪ್ರಿಲ್ ತಿಂಗಳಲ್ಲಿ ಮುಂದಿನ 5 ವರ್ಷಗಳವರೆಗಿನ ನಿರ್ವಹಣೆಯ ಒಡಂಬಡಿಕೆಯನ್ನು ಕರ್ನಾಟಕ ಸರಕಾರದೊಂದಿಗೆ ಈ ಖಾಸಗೀ ಕಂಪನಿಗಳು ಮಾಡಿಕೊಂಡಿವೆ. ಆದರೆ ಬಿ.ಆರ್.ಎಸ್. ಕಂಪೆನಿ ಈಗ ನಷ್ಟದಲ್ಲಿರುವುದರಿಂದ ಕಳೆದ ಕೆಲವು ತಿಂಗಳ ಹಿಂದೆ ಡಯಾಲಿಸೀಸ್ ಘಟಕದ ನಿರ್ವಹಣೆ ತನ್ನಿಂದ ಅಸಾಧ್ಯವೆಂದು ಸರಕಾರಕ್ಕೆ ಪತ್ರ ಬರೆದು ತಿಳಿಸಿದೆ ಎಂದವರು ವಿವರಿಸಿದರು.
ಇದೀಗ ಕರ್ನಾಟಕದ 23 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 122 ಡಯಾಲಿಸೀಸ್ ಘಟಕದ ಸುಮಾರು 1,000ಕ್ಕೂ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕಳೆದ 5 ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಸರಕಾರ ಹಾಗೂ ಖಾಸಗಿ ಸಂಸ್ಥೆಯ ನಡುವೆ ನಡೆದಿರುವ ಒಪ್ಪಂದದಂತೆ ನಡೆದುಕೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಕಳೆದ ಜೂ.30ರವರೆಗೆ ಒಟ್ಟು ಸುಮಾರು 33 ಕೋಟಿ ರೂ.ಗಳ ಬಾಕಿಯನ್ನು ಉಳಿಸಿರುವುದೇ ಈಗಿನ ಸಮಸ್ಯೆಗಳಿಗೆ ಕಾರಣವೆಂದು ಬಿಆರ್‌ಎಸ್ ಸಂಸ್ಥೆ ಆರೋಪಿಸುತ್ತಿದೆ ಎಂದವರು ಹೇಳಿದರು.
ಇದು ಸರಕಾರಕ್ಕೆ ಬಡ ಕಾರ್ಮಿಕರ ಹಾಗೂ ರೋಗಿಗಳ ಬಗ್ಗೆ ಇರುವ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇದರಿಂದಾಗಿ ಬಡ ರೋಗಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ರೋಗಿಗಳ ಸಾವು ನೋವು ಸಂಭವಿಸುವ ದಿನಗಳು ದೂರವಿಲ್ಲ. ನಿನ್ನೆ ಚಿಕಿತ್ಸೆಗೆಂದು ಬಂದ ಕಾಪುವಿನ ರೋಗಿಯೊಬ್ಬರು ಮೃತಪಟ್ಟ ವರದಿಯೂ ಇದೆ ಎಂದವರು ದೂರಿದರು.
ಉಡುಪಿಯ ಡಯಾಲಿಸೀಸ್ ಘಟಕದಿಂದ ಪ್ರತಿದಿನ 30ರಂತೆ ಸುಮಾರು 90ರಿಂದ 100 ಮಂದಿ ತುರ್ತು ಅಗತ್ಯದ ಬಡ ರೋಗಿಗಳು ಡಯಾಲಿಸೀಸ್‌ನ ಸೌಲಭ್ಯ ಪಡೆದುಕೊಳ್ಳುತಿದ್ದರು. ಅಲ್ಲದೇ ಇಲ್ಲಿನ 11 ಮಂದಿ ಸಿಬ್ಬಂದಿಗಳು ಸಹ ಐದು ತಿಂಗಳಿನಿಂದ ಸಂಬಳವಿಲ್ಲದೇ ಸಂಕಷ್ಟ ಅನುಭವಿಸುತಿದ್ದಾರೆ. ಸರಕಾರದ ನಿರ್ಲಕ್ಷದಿಂದ ಮುಂದೆ ಸಂಭವಿಸುವ ಯಾವುದೇ ಅಹಿತಕರ ಘಟನೆಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ರಾಜ್ಯ ಸರಕಾರ ನೇರ ಹೊಣೆಾಗುತ್ತದೆ ಎಂದವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ವಸಂತ ಕುಮಾರ್, ಸುಧೀರ್ ಪೂಜಾರಿ, ಯುವಶಕ್ತಿ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ, ಯೋಗಿಶ್ ಕುತ್ಪಾಡಿ, ಹನೀಫ್ ಕಾರ್ಕಳ ಉಪಸ್ಥಿತರಿದ್ದರು.