ಬಿಟ್ ಕಾಯಿನ್ ಪ್ರಕರಣ ಗಾಳಿಯಲ್ಲಿ ಗುಂಡು ಹೊಡೆದಂತೆ: ಸಚಿವ ಸುನಿಲ್ ಕುಮಾರ್

Update: 2021-11-13 15:57 GMT
ಸುನಿಲ್ ಕುಮಾರ್ (File Photo)

ಕಾರ್ಕಳ: ಯಾವುದೇ ಸಾಕ್ಷ್ಯಗಳಿಲ್ಲದ, ಆಧಾರವಿಲ್ಲದ ಪ್ರಕರಣವನ್ನು ನೂರು ಸುಳ್ಳು ಹೇಳುವ ಮೂಲಕ ಒಂದು ಸತ್ಯ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಅದು ಗಾಳಿಯಲ್ಲಿ ಗುಂಡು ಹೊಡೆದಂತೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2015-16ರಲ್ಲಿ ಇದು ನಡೆದಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ. 2015ರಿಂದ 2019ರ ತನಕ ಐಟಿಬಿಟಿ ಸಚಿವರಾಗಿದ್ದವರು ಇಂತಹ ಹ್ಯಾಕ್ ನಡೆಯುತ್ತಿರುವಾಗ ಖರ್ಗೆ ಏನು ಮಾಡುತ್ತಿದ್ದರು?. ಒಟ್ಟು ಈ ಹಗರಣ ಅವರ ಸುತ್ತ ಮುತ್ತ ತಿರುಗುತ್ತಿದೆ ಎನಿಸುತ್ತದೆ. 2016, 17 ಹಾಗೂ 18ರಲ್ಲಿ ಈ ಬಗೆಯ ಅವ್ಯವಹಾರಗಳನ್ನು ಅವರು ಮಾಡಿದಾಗಲೂ ಸರ್ಕಾರ ಆಗ ಗಮನಿಸಲಿಲ್ಲ. ಆಗ ಈ ಸಂಗತಿಗಳು ತಿಳಿದಿದ್ದರೂ ಯಾಕೆ ಕಾಂಗ್ರೆಸ್ ಮುಚ್ಚಿಟ್ಟಿತ್ತು?. ‘ಬಿಟ್ ಕಾಯಿನ್’ ಹಗರಣ ತನ್ನ ಮನೆಯ ಬಾಗಿಲನ್ನು ತಟ್ಟುತ್ತಿದೆ ಎಂದಾಗ ಅವರು ಬಾಲನ್ನು ನಮ್ಮ ಮೇಲೆ ಎಸೆಯಲು ಆರಂಭಿಸಿದ್ದಾರೆ ಎಂದರು.

ಕಾಂಗ್ರಸ್ ನಿಂದ ರಕ್ಷಣೆ ಸಿಕ್ಕಿ ಸರ್ಕಾರದಿಂದ ಬಂಧನಕ್ಕೆ ಒಳಗಾಗದೇ ಇದ್ದ ಆರೋಪಿಗಳನ್ನು ಬಿಜೆಪಿ ಸರ್ಕಾರ ಬಂದ ನಂತರವೇ ಬಂಧಿಸಿದ್ದು. ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿ ಹಣಕಾಸಿನ ವಿಷಯದ ಕುರಿತು ಆರೋಪ ಮಾಡಬೇಕಾದರೆ ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದು ಅವರು ಹೇಳಿದರು.

ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲಿ ಕಾಂಗ್ರೆಸ್ ಇದೇ ರೀತಿ ಮಾಡುತ್ತಾ ಬಂದಿದೆ. ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ರಫೇಲ್ ಕುರಿತು ಇದೇ ರೀತಿಯ ಆರೋಪಗಳನ್ನು ಮಾಡಿ ಹುಯಿಲೆಬ್ಬಿಸಿದ್ದರು.ನಂತರ ಅವರ ಮನೆಬಾಗಿಲಿಗೇ ಹಗರಣ ಬಂದು ನಿಂತಿದೆ. ಈಗ ‘ಬಿಟ್ ಕಾಯಿನ್’ ಹಗರಣ ಕೂಡಾ ಅವರ ಮನೆ ಬಾಗಿಲಿಗೆ ಬಂದಿದೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ ಮುಟ್ಟುವ ಕೆಲಸ ಮಾಡುತ್ತಿದ್ದು, ಮುಂದಿನ ಐದು ವರ್ಷವೂ ಮುಂದುವರಿಯುತ್ತದೆ. ಬಿಟ್ ಕಾಯಿನ್ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News