×
Ad

ವಿಧಾನ ಪರಿಷತ್ ಚುನಾವಣೆ: ದ.ಕ. ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಡಾ.ರಾಜೇಂದ್ರ ಕುಮಾರ್ ಕಣಕ್ಕೆ

Update: 2021-11-13 21:46 IST

ಮಂಗಳೂರು, ನ.13: ರಾಜ್ಯ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ದ.ಕ. ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಹಕಾರಿ ರಂಗದ ದಿಗ್ಗಜ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ.

ಸಹಕಾರಿ ಬಂಧುಗಳು, ನವೋದಯ ಸ್ವಾಸಹಾಯ ಸಂಘದ ಸದಸ್ಯರು ಹಾಗೂ ಹಿತೈಶಿಗಳ ಒತ್ತಾಯಕ್ಕೆ ಈ ನಿರ್ಧಾರಕ್ಕೆ ಬಂದಿದ್ದು, ನ.22ರಂದು ನಾಮಪತ್ರ ಸಲ್ಲಿಸುವುದಾಗಿ ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿಟ್ಟಿನಲ್ಲಿ ಶುಕ್ರವಾರ ಮೊದಲ ಸುತ್ತಿನ ಸಭೆ ನಡೆದಿದ್ದು, ಎಲ್ಲ ವಲಯಗಳಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಸಹಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ದ.ಕ. ಕ್ಷೇತ್ರದ ಮಟ್ಟದಲ್ಲಿ ಒಟ್ಟು 17 ಸಮಿತಿಗಳನ್ನು ರಚಿಸಿ, ಈಗಿಂದೀಗಲೇ ಪ್ರಚಾರಕ್ಕೆ ಇಳಿಯಲಾಗಿದೆ ಎಂದು ಅವರು ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಎಲ್ಲ ಸಮಿತಿಗಳ ಜೊತೆಯಲ್ಲಿ ಸಭೆ ನಡೆಸಲಾಗುವುದು. ಯಾವ ರೀತಿಯಲ್ಲಿ ಚುನಾವಣೆ ರಣತಂತ್ರ ರೂಪಿಸಬೇಕು ಎಂಬುದನ್ನು ಈಗಾಗಲೇ ಸಮಿತಿ ಸದಸ್ಯರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಚುನಾವಣೆ ಪ್ರಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನ.16ರಂದು ನಗರದ ಹೊಟೇಲ್ ಓಶಿಯನ್ ಪರ್ಲ್ ಮುಂಭಾಗದ ಇನ್‌ಲ್ಯಾಂಡ್ ಓರ್ನೆಟ್ ಸಮುಚ್ಚಯದಲ್ಲಿ ಕಚೇರಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ದ.ಕ. ಕ್ಷೇತ್ರದ ಬಹುತೇಕ ಎಲ್ಲ ಪಕ್ಷಗಳ ಸ್ಥಳೀಯ ಸಂಸ್ಥೆಗಳ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಹಲವು ಪಕ್ಷೇತರ ಸದಸ್ಯರು ಕೂಡ ನಮ್ಮೆಂದಿಗೆ ಕೈ ಜೋಡಿಸಲು ಮುಂದೆ ಬಂದಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರು ಕೂಡಾ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಎಂದರು.

ಸಂಚನ ಮೂಡಿಸಿದ ಸ್ಪರ್ಧೆ: ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪ್ರಕಟಿಸಿದ್ದರಿಂದ ಕ್ಷೇತ್ರದಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ದ.ಕ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಸ್ಥಾನವನ್ನು ಗೆಲ್ಲುವ ಸಾಮರ್ಥ್ಯ ಇದ್ದರೂ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸ್ಪರ್ಧೆ ಇದೀಗ ನಿರ್ಣಾಯಕ ಎನಿಸಿದೆ.

ಕಳೆದ 27 ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ತನ್ನದೆ ಆಸ ಛಾಪು ಮೂಡಿಸಿರುವ ಡಾ.ರಾಜೇಂದ್ರ ಕುಮಾರ್ ವಿಧಾನ ಪರಿಷತ್‌ನಲ್ಲಿ ಸಹಕಾರಿ ಕ್ಷೇತ್ರದವರಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸುತ್ತಾ ಬಂದವರು. ಇದಕ್ಕಾಗಿ ಅವರನ್ನು ಚುನಾವಣೆ ಕಣಕ್ಕೆ ಇಳಿಸಬೇಕು ಎಂಬುದು ಅವರ ಹಿತೈಶಿಗಳ ಒತ್ತಾಸೆಯಾಗಿತ್ತು. ಇದೀಗ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ನ.16ರಂದು ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ನ.16ರಂದು ಬೆಳಗ್ಗೆ 11ಕ್ಕೆ ನಗರದ ಹೊಟೇಲ್ ಓಶಿಯನ್ ಪರ್ಲ್ ಮುಂಭಾಗದ ಇನ್‌ಲ್ಯಾಂಡ್ ಓರ್ನೆಟ್ ಸಮುಚ್ಚಯದಲ್ಲಿ ನಡೆಯಲಿದೆ.
ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಅವರ ಅಭಿಮಾನಿಗಳ ಬಳಗದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಕ್ಷೇತ್ರಗಳ ಮುಖ್ಯಸ್ಥರನ್ನೊಳಗೊಂಡ 17 ಸಮಿತಿಗಳನ್ನು ರಚಿಸಲಾಗಿದೆ. ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಚುನಾವಣೆ ಪ್ರಚಾರ ಕಚೇರಿ ಉದ್ಘಾಟನೆ ನೆರವೇರಲಿದೆ. ಉದ್ಘಾಟನೆ ಬಳಿಕ ವಿವಿಧ ಸಮಿತಿಗಳ ಸಮಾಲೋಚನೆ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News