ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಡು ಪ್ರಾಣಿಗಳ ಹಾವಳಿ: ಬೋನು ಇರಿಸಿದ ಅರಣ್ಯ ಇಲಾಖೆ

Update: 2021-11-13 17:00 GMT

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ, ನರಿ, ಕಾಡುಹಂದಿ ಸೇರಿದಂತೆ ನವಿಲುಗಳು ರನ್ ವೇನಲ್ಲಿ ಓಡಾಡುತ್ತಿರುವುದು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಮಾನ ನಿಲ್ದಾಣ ಇರುವ ಪ್ರದೇಶ ಸೇರಿದಂತೆ ಆಸುಪಾಸಿನ ಕೆಂಜಾರು, ಅದ್ಯಪಾಡಿ ಪ್ರದೇಶಗಳು ಗುಡ್ಡ ಪ್ರದೇಶವಾಗಿದ್ದು, ಸಾಕಷ್ಟು ಮರಮಟ್ಟುಗಳು ಬೆಳೆದು ಕಾಡು ಪ್ರಾಣಿಗಳ ಆವಾಸ ಸ್ಥಾನವಾಗಿತ್ತು. ಹಿಂದೆ ಕೆಂಜಾರು ಪ್ರದೇಶದಲ್ಲಿ ಮಂಗಳೂರಿನಲ್ಲಿ ಅಪರೂಪವಾಗಿರುವ ಸಿಂಗಲೀಕವನ್ನು ವಿದ್ಯಾರ್ಥಿಗಳ ತಂಡವೊಂದು ಪತ್ತೆ ಹಚ್ಚಿತ್ತು. ಅಲ್ಲದೆ ಒಂದೆರಡು ವರ್ಷಗಳ ಹಿಂದೆ ನಗರದೊಳಗೆ ಕಾಣಿಸಿಕೊಂಡ ಕಾಡುಕೋಣವು ಇದೇ ಬಜ್ಪೆಪ್ರದೇಶದಿಂದ ಬಂದಿದ್ದವು ಎಂದು ಹೇಳಲಾಗಿತ್ತು. ಇತ್ತೀಚೆಗೆ ಮಂಗಳೂರಿನ ಮರೋಳಿ, ಕಂಕನಾಡಿ ಜನವಸತಿ ಪ್ರದೇಶದಲ್ಲೂ ಚಿರತೆಗಳು ಕಾಣಿಸಿಕೊಂಡಿತ್ತು.

ಇದೀಗ ರನ್ ವೇನಲ್ಲಿ ಪ್ರಾಣಿಗಳು ಓಡಾಟ ನಡೆಸುತ್ತಿರುವುದು ಅಪಾಯವಾಗಿದ್ದು, ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಸಂದರ್ಭದಲ್ಲಿ ಪ್ರಾಣಿಗಳು ಓಡಾಟ ನಡೆಸಿದ್ದಲ್ಲಿ ಅವಘಡಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ರನ್ ವೇನಲ್ಲಿ ಪ್ರಾಣಿಗಳ ಓಡಾಟ ನಡೆಸುತ್ತಿರುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳ ದೂರು ನೀಡಿದ್ದಾರೆ. ಅಧಿಕಾರಿಗಳ ಮನವಿಯ ಹಿನ್ನೆಲೆಯಲ್ಲಿ ಎರಡು ಮೂರು ಬಾರಿ ಅರಣ್ಯ ಇಲಾಖೆ ಕ್ಯೂಬಿಂಗ್ ನಡೆಸಿತ್ತು. ಅಲ್ಲದೆ ಇದೀಗ ಎರಡು ಬೋನುಗಳನ್ನು ಇರಿಸಿ ಪ್ರಾಣಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ವರೆಗೆ ಯಾವುದೇ ಪ್ರಾಣಿ ಬೋನಿಗೆ ಬಿದ್ದಿಲ್ಲ. ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿದ್ದು, ಚಿರತೆ ಸೇರಿದಂತೆ ಕಾಡುಪ್ರಾಣಿಗಳಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಮಾತ್ರ ಚಿರತೆ ಹೊತ್ತೊಯ್ದದ್ದಿದೆ.
-ಡಾ.ವೈ.ಕೆ.ದಿನೇಶ್ ಕುಮಾರ್‌, ಡಿಎಫ್‌ಒ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News