ನ.15ರಂದು ಬೈಡನ್, ಕ್ಸಿ ಜಿಂಪಿಂಗ್ ವರ್ಚುವಲ್ ವೇದಿಕೆಯಲ್ಲಿ ಚರ್ಚೆ

Update: 2021-11-13 18:28 GMT

ವಾಷಿಂಗ್ಟನ್, ನ.13: ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮುಂದುವರಿದಿರುವಂತೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಸೋಮವಾರ ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಉಭಯ ದೇಶಗಳ ನಡುವಿನ ಪೈಪೋಟಿಯನ್ನು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸುವ ಮತ್ತು ಜತೆಗೂಡಿ ಕಾರ್ಯನಿರ್ವಹಿಸಬಹುದಾದ ಕ್ಷೇತ್ರಗಳ ಬಗ್ಗೆ ಇಬ್ಬರು ಮುಖಂಡರು ಚರ್ಚಿಸಲಿದ್ದಾರೆ. ಸಭೆಯುದ್ದಕ್ಕೂ ಅಮೆರಿಕದ ಇರಾದೆ ಮತ್ತು ಆದ್ಯತೆಯನ್ನು ಬೈಡನ್ ಸ್ಪಷ್ಟಪಡಿಸಲಿದ್ದಾರೆ ಮತ್ತು ನಮ್ಮ ಕಳಕಳಿಯನ್ನು ಚೀನಾಕ್ಕೆ ಸ್ಪಷ್ಟ ಮತ್ತು ನೇರ ಮಾತುಗಳಲ್ಲಿ ತಲುಪಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ. ಸೆಪ್ಟಂಬರ್‌ನಲ್ಲಿ ಉಭಯ ಮುಖಂಡರ ನಡುವೆ ಫೋನ್ ಮೂಲಕ ಮಾತುಕತೆ ನಡೆದಿತ್ತು. ಸೋಮವಾರ ಅತ್ಯಂತ ವಿಸ್ತತ ರೂಪದಲ್ಲಿ ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಭೆಯ ನಿರ್ಧಿಷ್ಟ ವ್ಯವಸ್ಥೆಯ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಿರುವುದಾಗಿ ಚೀನಾ ಶುಕ್ರವಾರ ಹೇಳಿದೆ. ಉಭಯ ಮುಖಂಡರ ನಡುವಿನ ಚರ್ಚೆಯಲ್ಲಿ ಚೀನಾ-ಅಮೆರಿಕ ಸಂಬಂಧವನ್ನು ಮರಳಿ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯ ಹಳಿಗೆ ತರುವ ಸಂಘಟಿತ ಪ್ರಯತ್ನವಾಗಬೇಕು ಮತ್ತು ಸಭೆ ಯಶಸ್ವಿಯಾಗಬೇಕು ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಾಂಗ್ ವೆಬಿನ್ ಹೇಳಿದ್ದಾರೆ. ಜನವರಿಯಲ್ಲಿ ಬೈಡನ್ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದಂದಿನಿಂದ ಚೀನಾ-ಅಮೆರಿಕ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. 2018ರಲ್ಲಿ ಟ್ರಂಪ್ ಆಡಳಿತ ಚೀನಾದ ಮೇಲೆ ವಿಧಿಸಿದ ವ್ಯಾಪಾರ ಸುಂಕವನ್ನು ಬೈಡನ್ ಆಡಳಿತ ಮುಂದುವರಿಸಿದೆ. ಚೀನಾವು ಕ್ಸಿನ್‌ಜಿಯಾಂಗ್ ವಲಯ, ಟಿಬೆಟ್ ಮತ್ತು ಹಾಂಕಾಂಗ್‌ನಲ್ಲಿ ಮಾನವ ಹಕ್ಕು ಉಲ್ಲಂಘಿಸುತ್ತಿದೆ ಎಂದು ಅಮೆರಿಕ ಆರೋಪಿಸಿದ್ದರೆ, ಅಮೆರಿಕ ತನ್ನ ಹಣ ಮತ್ತು ಸೇನಾಬಲದ ಮೂಲಕ ಇತರ ದೇಶಗಳನ್ನು ನಿಗ್ರಹಿಸುತ್ತಿದೆ ಎಂದು ಚೀನಾ ಆರೋಪಿಸಿದೆ. ತೈವಾನ್ ವಿಷಯದಲ್ಲಿ ಚೀನಾ ತಳೆದಿರುವ ನಿಲುವನ್ನೂ ಅಮೆರಿಕ ವಿರೋಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News