ತೀರ್ಥಯಾತ್ರಾ ತಾಣಗಳಿಗೆ ತೆರಳುವ ರೈಲುಗಳಿಗೆ ಇನ್ನು 'ಸಾತ್ವಿಕ' ಪ್ರಮಾಣಪತ್ರ!
ಹೊಸದಿಲ್ಲಿ, ನ.14: ಇದೇ ಮೊದಲ ಬಾರಿಗೆ ಆಯ್ದ ರೈಲ್ವೆ ಮಾರ್ಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಧಾರ್ಮಿಕ ತಾಣಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳ ಪ್ರಯಾಣಿಕರು 'ಶುದ್ಧ ಸಸ್ಯಾಹಾರಿ' ಪರಿಸರವನ್ನು ತಮ್ಮ ಪ್ರಯಾಣದುದ್ದಕ್ಕೂ ಅನುಭವಿಸಲಿದ್ದಾರೆ.
ವಿಶ್ವದ ಮೊದಲ ಸಸ್ಯಾಹಾರಿ ಆಹಾರ ಸುರಕ್ಷೆ ಮತ್ತು ಸಸ್ಯಾಹಾರ ಮತ್ತು ಸಂಬಂಧಿತ ಅನುಸರಣೆಗಳ ನಿಯಂತ್ರಣಾತ್ಮಕ ಬದ್ಧತೆ ಸಂಸ್ಥೆ ಎಂದು ಹೇಳಿಕೊಂಡಿರುವ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿಕೆಯ ಪ್ರಕಾರ ಭಾರತೀಯ ರೈಲ್ವೆಯ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ), ಧಾರ್ಮಿಕ ತಾಣಗಳಿಗೆ ಪ್ರಯಾಣಿಸುವ ರೈಲುಗಳಿಗೆ ಸಾತ್ವಿಕ್ ಪ್ರಮಾಣಪತ್ರ ನೀಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.
ಆದರೆ ಈ ಸಂಬಂಧ ಐಆರ್‌ಸಿಟಿಸಿ ಅಥವಾ ರೈಲ್ವೆ ಸಚಿವಾಲಯ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದಾಗ್ಯೂ ಹಲವು ಮಾಧ್ಯಮಗಳು ಈ ಸಂಬಂಧ ವರದಿಗಳನ್ನು ಪ್ರಕಟಿಸಿವೆ.
ಸಾತ್ವಿಕ್ ಕೌನ್ಸಿಲ್ ಪ್ರಕಾರ, ಸೋಮವಾರ ಐಆರ್‌ಸಿಟಿಸಿಗೆ ಸಾತ್ವಿಕ್ ಪ್ರಮಾಣಪತ್ರ ಯೋಜನೆ ಆರಂಭಿಸಲಾಗುವುದು. ಇದರ ಅಡಿಯಲ್ಲಿ ಐಆರ್‌ಸಿಟಿಸಿ ಮೂಲ ಅಡುಗೆಮನೆ, ಎಕ್ಸಿಕ್ಯೂಟಿವ್ ಲಾಂಜ್‌ಗಳು, ಬಜೆಟ್ ಹೋಟೆಲ್‌ಗಳು, ಫುಡ್ ಪ್ಲಾಝಾಗಳು, ಪ್ರವಾಸ ಮತ್ತು ಪ್ರಯಾಣ ಪ್ಯಾಕೇಜ್‌ಗಳು, ರೈಲು ನೀರು ಘಟಕಗಳು ಸಾತ್ವಿಕ ಪ್ರಮಾಣಪತ್ರವನ್ನು ಪಡೆಯಲಿವೆ. ಇದು ಸಸ್ಯಾಹಾರ ಸ್ನೇಹಿ ವಾತಾವರಣವನ್ನು ಖಾತರಿಪಡಿಸಲಿದೆ ಎಂದು ಈ ಸರಕಾರೇತರ ಸಂಸ್ಥೆ ಹೇಳಿಕೆ ನೀಡಿದೆ. ಇದರ ಜತೆಗೆ ಕ್ಲೀನಿಂಗ್ ಏಜೆಂಟ್‌ಗಳು ಕೂಡಾ ನೈಸರ್ಗಿಕ ವಸ್ತುಗಳಾಗಿರುತ್ತವೆ. ಅಲ್ಲದೆ ಆಹಾರ ಸರಬರಾಜು ಮಾಡುವ ಪ್ಯಾಂಟ್ರಿ ಸಿಬ್ಬಂದಿ ಕೂಡಾ ಮಾಂಸಾಹಾರವನ್ನು ನಿರ್ವಹಿಸುವುದಿಲ್ಲ.
ರಾಜಧಾನಿ ಮತ್ತು ವೈಷ್ಣೋದೇವಿ ಮಂದಿರವನ್ನು ಸಂಪರ್ಕಿಸುವ ದಿಲ್ಲಿ- ಖಟ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಪ್ರಮಾಣಪತ್ರ ಪಡೆಯುವ ಮೊದಲ ರೈಲು ಎನಿಸಲಿದೆ. ಮುಂದಿನ ದಿನಗಳಲ್ಲಿ 18 ಇತರ ರೈಲುಗಳು ಈ ಪ್ರಮಾಣಪತ್ರ ಪಡೆಯಲಿವೆ ಎಂದು ಹೇಳಲಾಗಿದೆ.